Advertisement

ಸ್ವಲ್ಪ ಎಚ್ಚರ ತಪ್ಪಿದರೂ ಕೆರೆಗೆ ಬೀಳ್ಳೋದು ಖಚಿತ

10:50 PM Mar 25, 2021 | Team Udayavani |

ಗಂಗೊಳ್ಳಿ:  ಇಲ್ಲಿನ ಚರ್ಚ್‌ ರಸ್ತೆಯ ಬೀಚ್‌ ಬಳಿ ರಸ್ತೆಗೆ ತಾಗಿಕೊಂಡಿರುವ ಮಡಿವಾಳರ ಕೆರೆ ಅಪಾಯವನ್ನು ಆಹ್ವಾನಿಸುತ್ತಿದ್ದು, ಸ್ಥಳೀಯಾಡಳಿತ ಕಂಡೂ ಕಾಣದಂತೆ ವರ್ತಿಸುತ್ತಿರು ವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ದುರಸ್ತಿ ಇಲ್ಲ :

ಗಂಗೊಳ್ಳಿಯ ಚರ್ಚ್‌ ಬಳಿ ಇರುವ ಮಡಿವಾಳರ ಕೆರೆಯು ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಾಗಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಈ ಕೆರೆಯ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಅಷ್ಟಲ್ಲದೆ ಕೆರೆಯ ಹೂಳು ತೆಗೆಯುವ ಕಾರ್ಯ ಕೂಡ ನಡೆದಿಲ್ಲ. ಕೆರೆಯ ಸುತ್ತಲೂ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಕೆರೆಯ ಬಹುಭಾಗ ಅತಿಕ್ರಮಣವಾಗಿದೆ.  ಕೆರೆಯ ಸಮೀಪ ಎರಡು ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿದ್ದು ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಈ ರಸ್ತೆ ಮೂಲಕ ಶಾಲೆಗೆ ಬರುತ್ತಿದ್ದಾರೆ.

ಮೀನುಗಾರಿಕಾ ಬಂದರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರಿಂದ ಲಾರಿ ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತದೆ. ಆದರೆ ಕೆರೆಯ ಸುತ್ತ ಮಾತ್ರ ಈ ವರೆಗೆ ಯಾವುದೇ ಭದ್ರತೆ, ಆವರಣ ಗೋಡೆ ಮಾಡಿಲ್ಲ.

ಸಂಬಂಧ ಇಲ್ಲ :

Advertisement

ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್‌ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದೆ. ಗ್ರಾಮಸಭೆಗಳಲ್ಲಿ ಈ ವಿಚಾರ ಪ್ರಸ್ತಾವಗೊಂಡಿದ್ದರೂ ಈತನಕ ಯಾವುದೇ ಕೆಲಸ ನಡೆದಿಲ್ಲ ಎಂದು ಸಾರ್ವ ಜನಿಕರು ಆರೋಪಿಸಿದ್ದಾರೆ. ಕೆರೆಯ ಸುತ್ತಲೂ ತ್ಯಾಜ್ಯ ವಿಸರ್ಜನೆಯನ್ನು ತಡೆಯುವಂತೆ ಮಾಡಿ ಕೊಂಡ ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕಿಂತ ಮುಖ್ಯವಾಗಿ ಕೆರೆಯು ರಸ್ತೆಗೆ ತಾಗಿಕೊಂಡಿರುವುದರಿಂದ ಈ ಭಾಗದಲ್ಲಿ ಭದ್ರತಾ ಬೇಲಿ ಅಳವಡಿಸಬೇಕಾದ ಆವಶ್ಯಕತೆ ಇದೆ. ಸ್ಥಳೀಯಾಡಳಿತ ಜನರ ಜೀವದೊಂದಿಗೆ ಚೆಲ್ಲಾಟವಾಡದೆ ಕೆರೆಗೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.

ಭದ್ರತೆಗಾಗಿ ಬೇಲಿ ಅಳವಡಿಸಿ :  ರಸ್ತೆಯಲ್ಲಿ ವಾಹನ ಸಂಚರಿಸುವಾಗ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ರಸ್ತೆಯ ಬದಿಯಲ್ಲಿ ನಡೆದಾಡಲು ಭಯಪಡುತ್ತಿದ್ದಾರೆ. ಕೊಂಚ ಎಚ್ಚರಿಕೆ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.  ಕೆರೆಯ ಸುತ್ತಲೂ ಬೇಲಿ ಅಳವಡಿಸಿ ಭದ್ರತೆ ನೀಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೆರೆಯ ಬಹುಭಾಗ ಅತಿಕ್ರಮಣಗೊಂಡಿದ್ದು ಇದನ್ನು ತೆರವುಗೊಳಿಸಿ ಕೆರೆಯನ್ನು ಸಂರಕ್ಷಿಸುವಂತೆ ಸಾರ್ವಜನಿಕರ ಕೂಗು  ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದೆ.

ಕೆರೆ ಪ್ರದೇಶದಲ್ಲಿ ಅಗತ್ಯ ಭದ್ರತಾ ಕಾಮಗಾರಿ ನಡೆಯದಿರುವುದರಿಂದ ರಾತ್ರಿ ವೇಳೆಯಲ್ಲಿ  ಇಲ್ಲಿ ಸಂಚರಿಸುವುದು ಅಪಾಯಕಾರಿ. ಕೆರೆಯ ಆಸುಪಾಸಿನಲ್ಲಿ ಎಲ್ಲಿಯೂ ಸೂಚನ ಫಲಕವೂ ಅಳವಡಿಸಿಲ್ಲ.

ರಸ್ತೆಗೂ ಕೆರೆಗೂ ಕೆಲವೇ ಅಡಿ ಅಂತರ :

ರಸ್ತೆ ಮತ್ತು ಕೆರೆಯ ನಡುವೆ ಕೇವಲ 2-3 ಅಡಿ ಮಾತ್ರ ಅಂತರವಿದ್ದು, ರಸ್ತೆಯಲ್ಲಿ ಎರಡು ವಾಹನ ಏಕಕಾಲದಲ್ಲಿ ಸಂಚರಿಸಲು ಸಾಧ್ಯವಿಲ್ಲ. ವಾಹನ ಸವಾರ ಎಚ್ಚರ ತಪ್ಪಿದರೆ ವಾಹನ ಕೆರೆಗೆ ಬೀಳುವ ಸಾಧ್ಯತೆ ಇದೆ. ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಸುಮಾರು 5-6 ಅಡಿ ಆಳದ ಗುಂಡಿಯಿದ್ದು ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾದ ಸಂದಿಗ್ಧ ಸ್ಥಿತಿ ನಿರ್ಮಾಣಗೊಂಡಿದೆ. ರಾತ್ರಿ ವೇಳೆಯಲ್ಲಿ ಈ ರಸ್ತೆ ಮೂಲಕ ಸಂಚರಿಸುವುದು ಅಪಾಯಕಾರಿ. ಕೆರೆಯ ಆಸುಪಾಸಿನಲ್ಲಿ ಎಲ್ಲಿಯೂ ಸೂಚನಾ ಫಲಕವೂ ಇಲ್ಲ. ಹೊಸಬರು ಈ ರಸ್ತೆ ಮೂಲಕ ಸಂಚರಿಸುವಾಗ ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ  ಅಗತ್ಯವಿದೆ. ಕಳೆದ ವರ್ಷ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ನಡೆದಿದ್ದು, ಈ ವೇಳೆ ಕೆರೆ ಪ್ರದೇಶದಲ್ಲಿ ಅಗತ್ಯ ಭದ್ರತಾ ಕಾಮಗಾರಿ ನಡೆಸದಿರುವುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಗಂಗೊಳ್ಳಿ ಚರ್ಚ್‌ ಬಳಿ ಇರುವ ಕೆರೆಗೆ ಈವರೆಗೆ ಯಾವುದೇ ಭದ್ರತಾ ಬೇಲಿ ಅಳವಡಿಸುವ ಕಾರ್ಯ ನಡೆದಿಲ್ಲ. ಕೆರೆಯು ರಸ್ತೆಗೆ ತಾಗಿ ಕೊಂಡಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆ ಮೂಲಕ ನೂರಾರು ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗುತ್ತಿದ್ದು, ಆಯಾ ತಪ್ಪಿ ಕೆರೆಗೆ ಬಿದ್ದು ಪ್ರಾಣಾಪಾಯವಾಗುವ ಸಂಭವ ಇದೆ. ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಕೆರೆಗೆ ಅಗತ್ಯ ಭದ್ರತೆ ಒದಗಿಸಬೇಕು. – ಸುಬ್ರಹ್ಮಣ್ಯ, ವಾಹನ ಸವಾರ, ಗಂಗೊಳ್ಳಿ

ಗಂಗೊಳ್ಳಿ ಚರ್ಚ್‌ ಬಳಿ ಇರುವ ಕೆರೆಗೆ ಭದ್ರತಾ ಬೇಲಿ ಅಳವಡಿಸಲು, ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆರೆಯ ಸಮೀಪ ತ್ಯಾಜ್ಯ ವಿಲೇವಾರಿ ಮಾಡದಂತೆ ಸುತ್ತಮುತ್ತಲಿನ ಜನರಲ್ಲಿ ಮನವಿ ಮಾಡಲಾಗಿದ್ದು ತ್ಯಾಜ್ಯ ವಿಲೇವಾರಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ದಿನೇಶ ಶೇರುಗಾರ್‌, ಕಾರ್ಯದರ್ಶಿ, ಗಂಗೊಳ್ಳಿ ಗ್ರಾಮ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next