ಭಟ್ಕಳ: ಪಟ್ಟಣದ ಮದೀನಾ ಕಾಲೋನಿಯನ್ನು ಕೋವಿಡ್-19 ಹಾಟ್‌ಸ್ಪಾಟ್ ಕ್ಲಸ್ಟರ್ ಎಂದು ಗುರುತಿಸಿದ್ದು, ಸಂಪೂರ್ಣ ಸೀಲ್‌ಡೌನ್ ಮಾಡಲಾಗುವುದು ಎಂದು ಎಸ್‌ಪಿ ಶಿವಪ್ರಕಾಶ ದೇವರಾಜು ತಿಳಿಸಿದರು.
ಭಟ್ಕಳದ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದೀನಾ ಕಾಲೋನಿಗೆ ಹೋಗಿ ಬರುವ ಎಲ್ಲ ಮಾರ್ಗಗಳನ್ನು ಕೂಡಾ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಸಂಪೂರ್ಣ ಪ್ರದೇಶಕ್ಕೆ ಹೋಗಿ ಬರಲು ಒಂದೇ ದಾರಿ ಇಡಲಾಗುವುದು. ಆ ಪ್ರದೇಶದಿಂದ ಜನರು ಯಾರೂ ಕೂಡಾ ಹೊರಕ್ಕೆ ಬರಬಾರದು, ಅಲ್ಲಿಗೆ ಯಾರೂ ಹೋಗಬಾರದು ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಭಟ್ಕಳವನ್ನು ಈಗಾಗಲೇ ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಲಾಗಿದ್ದು, ಅದಕ್ಕಿಂತ ಹೊರಗಿನ ಐದು ಕಿ.ಮೀ. ಪ್ರದೇಶವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಕಂಟೈನ್‌ಮೆಂಟ್ ಜೋನ್ ಗೆ ಪೂರ್ವದಲ್ಲಿ ರೈಲ್ವೆ ನಿಲ್ದಾಣದ ರಸ್ತೆ, ಪಶ್ಚಿಮಕ್ಕೆ ತಲಗೇರಿ ರಸ್ತೆ, ಉತ್ತರಕ್ಕೆ ವೆಂಕಟಾಪುರ ನದಿ, ದಕ್ಷಿಣಕ್ಕೆ ಮುಂಡಳ್ಳಿ ಗ್ರಾಮದ ಗಡಿ ಭಾಗವೇ ಅಂತಿಮ ಗಡಿಯಾಗಿದ್ದು, ಬಫರ್ ಜೋನ್ ಅದರ ಐದು ಕಿ.ಮೀ. ವ್ಯಾಪ್ತಿ ಹೊಂದಿದೆ ಎಂದರು.
ಮದೀನಾ ಕಾಲೋನಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ನೀಡಿದ ಪಾಸ್ ಹಿಂಪಡೆಯಲಾಗುವುದು. ಸರಕಾರಿ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಜನರು ಸರಕಾರದೊಂದಿಗೆ ಸಹಕಾರ ನೀಡಬೇಕು ಎಂದು ಕೋರಿದ ಅವರು, ಸರಕಾರ ನೀಡಿದ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಾರೆಯೇ ವಿನಃ ಜನತೆಯ ಮೇಲೆ ನಮಗೆ ಯಾವುದೇ ಪೂರ್ವಾಗ್ರಹ ಇಲ್ಲ ಎಂದೂ ಅವರು ಹೇಳಿದರು. ಭಟ್ಕಳದಲ್ಲಿ ಜಿಲ್ಲೆಯಿಂದ ಹೆಚ್ಚುವರಿ ಪಡೆಯನ್ನು ತರಿಸಿಕೊಳ್ಳಲಾಗುವುದು. ಎರಡು ಕೆಎಸ್‌ಆರ್‌ಪಿ ತುಕಡಿ, 200ರಿಂದ 250 ಪೊಲೀಸರನ್ನು ಕರೆಯಿಸಿ ಬಿಗು ಬಂದೋಬಸ್ತ್ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ಮುರ್ಡೇಶ್ವರದಲ್ಲಿ ಇರಿಸಲಾಗಿದ್ದ ಹೊರಗಿನಿಂದ ಬಂದು ಕ್ವಾರಂಟೈನ್‌ನಲ್ಲಿ ಇರುವವರಿಗೆ ವ್ಯವಸ್ಥೆ ಸರಿಯಾಗಿಲ್ಲ ಎಂದು ದೂರುಗಳು ಬಂದಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ಅವರಲ್ಲಿ ಕೇಳಿದಾಗ, ಅವರು ಹಾಗೇನಿಲ್ಲ, ಅವರನ್ನು ಹೊನ್ನಾವರದಲ್ಲಿ ಇರಿಸುವ ವಿಚಾರ ಇತ್ತು. ನಂತರ ದೂರವಾಗುತ್ತದೆ ಎಂದಾಗ ಮರ್ಡೇಶ್ವರದಲ್ಲಿ ವ್ಯವಸ್ಥೆ ಮಾಡಲಾಯಿತು ಎಂದರು.
ರಾಜಕೀಯ ಒತ್ತಡಕ್ಕೆ ಮಣಿದು ಕೆಲವರನ್ನು ಮನೆಗೆ ಕಳುಹಿಸಿದ್ದೀರಿ ಎನ್ನುವ ಮಾತು ಕೇಳಿ ಬಂದಿದೆ ಎಂದು ಕೇಳಿದ್ದಕ್ಕೆ, ಸರಕಾರದ ನಿಯಮಾವಳಿ ಪ್ರಕಾರವೇ ಮನೆಗಳಿಗೆ ಕಳುಹಿಸಲಾಗಿದೆ. ಅಂತರ್ ಜಿಲ್ಲೆಯಿಂದ ಬಂದವರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲು ಅವಕಾಶ ಇದೆ ಎಂದರು.