ಮಡಿಕೇರಿ: ಭಾರತೀಯ ಸೇನೆಯ ವಿವಿಧ ವಿಭಾಗಗಳಿಗೆ ಆರು ದಿನಗಳ ಕಾಲ ನಡೆಯುವ ಸೇನಾ ಭರ್ತಿ ರ್ಯಾಲಿಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.
ಸೇನೆಯ ಬೆಂಗಳೂರು ಕೇಂದ್ರ ಕಚೇರಿಯ ಭರ್ತಿ ವಿಭಾಗದಿಂದ ಅ.18ರ ವರೆಗೆ ಮಡಿಕೇರಿಯಲ್ಲಿ ನಡೆಯುವ ರ್ಯಾಲಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಯುವಕರು ಪಾಲ್ಗೊಂಡಿದ್ದಾರೆ. ಬೆಳಗೆ 6 ಗಂಟೆಗೆ ಆರಂಭವಾದ ರಾಲಿಯಲ್ಲಿ ಮೊದಲಿಗೆ ಅಭ್ಯರ್ಥಿಗಳ ಎತ್ತರ ಪರೀಕ್ಷೆಯನ್ನು ನಡೆಸಿ ಬಳಿಕ ಮೈದಾನದ ಒಳಗೆ ಬಿಡಲಾಯಿತು. ತದನಂತರ 80 ಮಂದಿ ಯುವಕರ ತಂಡಕ್ಕೆ 1.6 ಕಿ.ಮೀ. ಓಟವನ್ನು ಕೇವಲ 6 ನಿಮಿಷಗಳಲ್ಲಿ ಪೂರೈಸುವ ಸಮಯವನ್ನು ನಿಗಧಿ ಪಡಿಸಲಾಗಿತ್ತು. ಓಟವನ್ನು ಯಶಸ್ವಿಯಾಗಿ ಪೂರೈಸಿದ ಅರ್ಹರನ್ನು ಅವರು ಕ್ರಮಿಸಿದ ಸಮಯದ ಆಧಾರದಲ್ಲಿ 3 ಪ್ರತ್ಯೇಕ ವರ್ಗಮಾಡಿ, ಬಳಿಕ ದೈಹಿಕ ಪರೀಕ್ಷಗೆ ಒಳಪಡಿಸಲಾಯಿತು. ಕೆಲವು ಯುವಕರು ಕೂದಲೆಳೆಯ ಅಂತರದಲ್ಲಿ ಓಟದಲ್ಲಿ ಅನುತ್ತೀರ್ಣರಾಗಿ ಭರ್ತಿಯಿಂದ ಹೊರ ನಡೆಯಲ್ಪಟ್ಟರೆ, ಮತ್ತೆ ಕೆಲವರು ಮುಂದಿನ ಪರೀಕ್ಷೆಗಳಿಗೆ ಅರ್ಹತೆ ಪಡೆದರು.
ಕೊಡಗು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಮಹಾನಗರ, ಬೆ.ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಿಂದ ನೂರಾರು ಯುವಕರು ಶನಿವಾರ ಸಂಜೆಯ ವೇಳೆಗೆ ಮಡಿಕೇರಿಗೆ ಆಗಮಿಸಿದ್ದರು. ಭಾನುವಾರ ಬೆಳಗಿನ 4 ಗಂಟೆಯ ವೇಳೆಗೆ ಹಲವಾರು ಯುವಕರು ಮೈದಾನದಲ್ಲಿ ಉಪಸ್ಥಿತರಿದ್ದು ಭರ್ತಿಯಲ್ಲಿ ಆದಿಯಾಗಿ ಪಾಲ್ಗೊಂಡರು. ಬೆಂಗಳೂರು ವಲಯ ನೇಮಕಾತಿ ವಿಭಾಗದ ಅಧಿಕಾರಿ ಕರ್ನಲ್ ನವರತನ್ ಶಿಬಿಯಾ, ಬ್ರಿಗೇಡಿಯರ್ ರಾಯ್ ಮತ್ತು ಬೆಂಗಳೂರು ಕಮಾಂಡೋ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಶಿಬಿರಲ್ಲಿ ಹಾಜರಿದ್ದು, ಖುದ್ದಾಗಿ ವಿವಿಧ ಪರೀಕ್ಷೆಗಳನ್ನು ನೆರವೇರಿಸಿದರು.
ಬೆಂಗಳೂರಿನ ಆರ್ಮಿ ಸಪ್ಲೆç ಕೋರ್‌ನ ಸೈನ್ಯಾಧಿಕಾರಿ ಕರ್ನಲ್ ಬನ್ವರ್ ರಾಮ್ ಮತ್ತು ಸೇನಾ ಭರ್ತಿ ವಿಭಾಗದ ಯೋಧರು ಗುರುವಾರವೇ ಮಡಿಕೇರಿಗೆ ಆಗಮಿಸಿ, ಭರ್ತಿ ನಡೆಯುವ ಜನರಲ್ ತಿಮ್ಮಯ್ಯ ಮೈದಾನವನ್ನು ಸಜ್ಜುಗೊಳಿಸಿದ್ದರು. ಶನಿವಾರ ರಾತ್ರಿ ವೇಳೆಯಲ್ಲಿ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿತ್ತಾದರೂ, ಸೇನಾ ಭರ್ತಿಯಲ್ಲಿ ಪಾಲ್ಗೊಂಡ ಯುವಕರು ಉತ್ಸಾಹದಿಂದಲೇ ಓಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಭರ್ತಿಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಯುವಕರನ್ನು ಹೊರತುಪಡಿಸಿ ಮೈದಾನಕ್ಕೆ ಯುವಕ ಪೋಷಕರು ಮತ್ತು ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಸೇನಾ ಯೋಧರು, ಜಿಲ್ಲಾ ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಮೈದಾನದ ಸುತ್ತಲು ನಿಯೋಜಿಸಲಾಗಿತು.