Advertisement

ಮಡಿಕೇರಿ: ದಂಪತಿಯ ಸಮಯ ಪ್ರಜ್ಞೆ; ತಪ್ಪಿತು ಅನಾಹುತ

11:36 AM Dec 30, 2021 | Team Udayavani |

ಮಡಿಕೇರಿ: ಬೆಳೆಗಾರ ದಂಪತಿಯ ಸಮಯ ಪ್ರಜ್ಞೆ ಮತ್ತು ಸಾಹಸದ ಪ್ರತಿರೋಧದಿಂದ ಚೋರನೊಬ್ಬ ನಡೆಸಬಹುದಾಗಿದ್ದ ಕುಕೃತ್ಯವೊಂದು ತಪ್ಪಿದ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ಬೆಳೆಗಾರನ ಕೈಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿ ದರೋಡೆಕೋರ ಕಾಫಿ ತೋಟದೊಳಗೆ ಪರಾರಿಯಾಗಿದ್ದಾನೆ.

Advertisement

ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ, ನಾಲ್ಕೇರಿ ಗ್ರಾಮದ ಸುಳ್ಳಿಮಾಡ ಗೋಪಾಲ್‌ ತಿಮ್ಮಯ್ಯ ಅವರು ಪತ್ನಿಯೊಂದಿಗೆ ಮನೆಯಲ್ಲಿದ್ದಾಗ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಸ್ಕ್ ಹಾಕಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಲಾಕ್‌ ಮಾಡದ ಬಾಗಿಲನ್ನು ನೂಕಿಕೊಂಡು ಒಳನುಗ್ಗಿದ್ದಾನೆ. ಇದನ್ನು ಕಂಡ ಗೋಪಾಲ್‌ ಅವರ ಪತ್ನಿ ಒಳಕೋಣೆಯಲ್ಲಿದ್ದ ಗೋಪಾಲ್‌ ತಿಮ್ಮಯ್ಯ ಅವರನ್ನು ಕೂಗಿದಾಗ, ಅಪರಿಚಿತ ಮನೆಯ ಮತ್ತೂಂದು ಕೋಣೆಗೆ ನುಗ್ಗಿ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದಾನೆ. ಅಪರಿಚಿತ ವ್ಯಕ್ತಿಯನ್ನು ಮನೆಯಿಂದ ಹೊರಹಾಕಲು ಗೋಪಾಲ್‌ ತಿಮ್ಮಯ್ಯ ಅವರು ಅಲ್ಲಿಯೇ ಇದ್ದ ಕೋಲಿನಿಂದ ಅಪರಿಚಿತನೊಂದಿಗೆ ಹೋರಾಟ ನಡೆಸಿದ್ದು, ಈ ಸಂದರ್ಭ ಅಪರಿಚಿತ ತನ್ನ ಬಳಿ ಇದ್ದ ಚಾಕುವಿನಿಂದ ಗೋಪಾಲ್‌ ಅವರ ಕೊರಳಿನ ಭಾಗಕ್ಕೆ ಇರಿಯಲು ಮುಂದಾಗಿದ್ದಾನೆ. ಅದನ್ನು ತಡೆಯುವಾಗ ಗೋಪಾಲ್‌ ತಿಮ್ಮಯ್ಯ ಅವರು ಎಡ ಕೈಗೆ ಆಳವಾದ ಗಾಯವಾಗಿದೆ. ಅದರೂ ಅಪರಿಚಿತನನ್ನು ಹೊರ ಹಾಕಲು ಕೋಲಿನಿಂದ ಪ್ರಹಾರ ಮುಂದುವರಿಸಿದ್ದು, ಈ ವೇಳೆ ಪತ್ನಿ ಸಹ ಜೋರಾಗಿ ಕೂಗಿಕೊಂಡ ಹಿನ್ನೆಲೆ ದರೊಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ.

ಕೂಡಲೇ ಗ್ರಾಮದಲ್ಲಿರುವ ತನ್ನ ಸಹೋದರನ ಪುತ್ರ, ರಜೆಯಲ್ಲಿ ಬಂದಿದ್ದ ಸೇನಾಧಿಕಾರಿ ಕರ್ನಲ್‌ ಡಾ| ದಿಲನ್‌ ಭೀಮಯ್ಯ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅವರಿಂದ ಪ್ರಥಮ ಚಿಕಿತ್ಸೆ ಪಡೆದ ಗೋಪಾಲ್‌ ತಿಮಯ್ಯ, ಗೋಣಿಕೊಪ್ಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಅಪರಿಚಿತ ವ್ಯಕ್ತಿ ಕಳೆದ ವರ್ಷವೂ ಬಂದಿದ್ದು, ಮನೆಯ ಎದುರಿನ ಬಾಗಿಲಿನಲ್ಲಿ ನಿಂತು ಬೆಲ್‌ ಮಾಡಿದ್ದರು. ಬಾಗಿಲು ಲಾಕ್‌ ಮಾಡಿದ್ದರಿಂದ ಕಿಟಿಕಿ ಮೂಲಕ ವಿಚಾರಿಸಿದಾಗ ಮಾತನಾಡದೇ ಇದ್ದುದನ್ನು ಕಂಡು ಆತಂಕದಿಂದ ತಮ್ಮ ಕಾರ್ಮಿಕರನ್ನು ಕೂಗಿದಾಗ, ತೋಟದೊಳಗೆ ಪರಾರಿಯಾಗಿದ್ದ ಎಂದು ಗೋಪಾಲ್‌ ತಿಮ್ಮಯ್ಯ ಅವರ ಪತ್ನಿ ಹೇಳಿದ್ದಾರೆ. ಡಿ.ವೈ,ಎಸ್‌.ಪಿ.ಜಯಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ದಕ್ಷಿಣ ಕೊಡಗಿನ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next