Advertisement

ಅಪಾಯದಲ್ಲಿದೆ ಮಡಿಕೇರಿ ಅರಮನೆ

06:00 AM Aug 26, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯ ಪ್ರತಿಷ್ಠಿತ ಮಡಿಕೇರಿ ಅರಮನೆ ಅಪಾಯದಲ್ಲಿದೆ! ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಅಂಗವಿಕಲ ಕಲ್ಯಾಣ ಇಲಾಖೆ, ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸೇರಿದಂತೆ 20ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವ ಈ ಅರಮನೆ ಮಳೆಯಿಂದಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಎದುರಾಗಿದೆ.

Advertisement

ಮಡಿಕೇರಿಯ ಹೃದಯ ಭಾಗದಲ್ಲಿ ಇರುವ “ಮಡಿಕೇರಿ ಕೋಟೆ’ಯ ಒಳಭಾಗದಲ್ಲಿ ಈ ಬೃಹತ್‌ ಅರಮನೆ ಇದೆ. ಅದರ ಪಕ್ಕದಲ್ಲಿ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯ ಮತ್ತು ಮಡಿಕೇರಿ ನ್ಯಾಯಾಲಯ ಸಂಕೀರ್ಣವೂ ಇದೆ. ಅರಮನೆ ಹಸ್ತಾಂತರ ಸಂಬಂಧ ಇಲಾಖೆ ಮತ್ತು ಜಿಲ್ಲಾಡಳಿತ ನಡುವೆ ಸಂಘರ್ಷವೂ ನಡೆಯುತ್ತಿದ್ದು, ಸರ್ಕಾರಿ ಕಚೇರಿಗಳು ಅರಮನೆ ಒಳಗೆ ಇರುವುದರಿಂದ ಇಲಾಖೆಗೆ ಇನ್ನೂ ಹಸ್ತಾಂತರಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಕೆಲವೇ ತಿಂಗಳಲ್ಲಿ ಹಸ್ತಾಂತರ ಕಾರ್ಯ ನಡೆಯಲಿದೆ ಎಂದಿದ್ದಾರೆ.

ಮಳೆಯಿಂದಾಗಿ ಅಪಾರ ಹಾನಿ
ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಅಪಾರ ನಷ್ಟವುಂಟಾಗಿದ್ದು, ಹಾಗೇ ಮಡಿಕೇರಿಯ ಅರಮನೆಗೂ ಹಾನಿಯಾಗಿದೆ. ಅರಮನೆಯ ಹಿಂಭಾಗದ ಹೆಂಚುಗಳು ನೆಲಕ್ಕುರುಳಿವೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಕೆಲವು ಭಾಗದಲ್ಲಿ ತಡೆಗೋಡೆಯ ಕಲ್ಲುಗಳೆ ಕುಸಿದಿವೆ. ಹೀಗಾಗಿ ಜಿಲ್ಲಾಡಳಿತ ಅಥವಾ ಜಿಲ್ಲಾಪಂಚಾಯಿತಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

350 ವರ್ಷಗಳ ಹಿಂದೆಯೇ ನಿರ್ಮಿಸಿರುವ ಈ ಅರಮನೆ ಇತ್ತೀಚಿನ ವರ್ಷಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಂಡಿಲ್ಲ. ಪುರಾತತ್ವ ಇಲಾಖೆಯ ಅನುಮತಿ ಇಲ್ಲದೆ,  ಜಿಲ್ಲಾಡಳಿತ ಅಥವಾ ಜಿಲ್ಲಾ ಪಂಚಾಯಿತಿಗೆ ಅಭಿವೃದ್ಧಿ ಪಡಿಸಲಿಕ್ಕೂ ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳ ಹೊಸ ಕಚೇರಿ ಸಂಕೀರ್ಣಕ್ಕೆ ಕೆಲವೊಂದು ಇಲಾಖೆಯನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆದರೆ, ಮಡಿಕೇರಿ ತಾಲೂಕು ಕಚೇರಿಯ ದಾಖಲೆ ಪತ್ರಗಳ ಸಂಗ್ರಹ ಇಲ್ಲೇ ಇದ್ದು, ಅದಕ್ಕೂ ಹಾನಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಮಳೆ ಹಾನಿ, ಗುಡ್ಡ ಕುಸಿತದಿಂದ ಜಿಲ್ಲೆಯ ಯಾವುದೇ ಸ್ಮಾರಕಗಳಿಗೆ ಹಾನಿಯಾಗಿಲ್ಲ. ಮನೆ, ಜಮೀನು ಇತ್ಯಾದಿಗಳಿಗೆ ಹಾನಿಯಾಗಿರುವ ವರದಿ ಜಿಲ್ಲಾಡಳಿತಕ್ಕೆ ಈಗಾಗಲೇ ಬಂದಿದೆ. ಆದರೆ, ಮೂರು ತಾಲೂಕಿನಲ್ಲಿ ಸ್ಮಾರಕಗಳಿಗೆ ಹಾನಿಯಾಗಿರುವ ಯಾವ ವರದಿಯೂ ಬಂದಿಲ್ಲ.
– ಪಿ.ಐ.ಶ್ರೀವಿದ್ಯಾ, ಕೊಡಗು ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next