Advertisement

ಮಡಿಕೇರಿ: ನಾಡಪ್ರಭು ಕೆಂಪೇಗೌಡ ಜಯಂತಿ

07:05 AM Sep 02, 2017 | |

ಮಡಿಕೇರಿ: ಆದರ್ಶ ಆಡಳಿತಗಾರ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ನಡೆಯಿತು.  

Advertisement

ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಗರ ನಿರ್ಮಿ ಸಿದಂತಹ ಮಹಾನ್‌ ಪುರುಷರು. ಮೊದಲನೇ ಬಾರಿಗೆ ಕೊಡಗಿನಲ್ಲಿ ಕೆಂಪೇಗೌಡರ ಜಯಂತಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ಕೆಂಪೇಗೌಡರ ವ್ಯಕ್ತಿತ್ವವನ್ನು ಯುವ ಪೀಳಿಗೆ ಮೈಗೂಡಿಸಿಕೊಂಡು ಸೋದರ ಭಾವದಲ್ಲಿ ಜೀವಿಸಬೇಕು ಎಂದು ಅವರು ಹೇಳಿದರು.

ಉಪನ್ಯಾಸಕರಾದ ತಲಕಾಡು ಪ್ರೊ| ಚಿಕ್ಕರಂಗೇಗೌಡ ಅವರು ಮಾತನಾಡಿ, ಕೆಂಪೇಗೌಡರು 1,510ರಲ್ಲಿ ಬೆಂಗಳೂ ರಿನ ಬಳಿ ಇರುವ ಕೂಡಿಗೆ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕೆಂಪೆನಂಜೇಗೌಡರು. ವಿಜಯನಗರ ಅರಸರ ಆಳ್ವಿಕೆಯಲ್ಲಿ ಸಾಮಂತರಾಗಿ ಆಡಳಿತ ನಡೆಸುತ್ತಿದ್ದರು. ಕೆಂಪೇಗೌಡರು 48 ಅಗ್ರಹಾರಗಳನ್ನು ಸ್ಥಾಪಿಸಿದರು. ನಾಡು ಕಟ್ಟುವಲ್ಲಿ ಶ್ರಮಿಸಿದರು. ವರ್ತಕರಿಗೆ ಪ್ರೋತ್ಸಾಹ ನೀಡಿ ಆಡಳಿತದಲ್ಲಿ ಜನಪರ ಕಾರ್ಯನಿರ್ವಹಿಸಿದರು. ಕೆಂಪೇ ಗೌಡರು ನೀರಾವರಿ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಿ ರೈತರಿಗೆ ಅನುಕೂಲವಾಗುವಂತೆ ಕೆರೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿ ರೈತರ ಶ್ರೇಯಸ್ಸಿಗೆ ಶ್ರಮಿಸಿದರು. ಕೆಂಪೇಗೌಡರು ನಿರ್ಮಿಸಿದ ಅಗ್ರಹಾರಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿದರೆ ಅವರ ಬಗ್ಗೆ ಹೆಚ್ಚು ವಿಚಾರ ತಿಳಿಯುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ನುಡಿದರು. 

16ನೇ ಶತಮಾನದಲ್ಲಿ ವಿಶಿಷ್ಟ ರೀತಿಯ ದೇವಾಲಯಗಳನ್ನು ಇವರು ನಿರ್ಮಿಸಿದ್ದಾರೆ. ಬರೀ ಬೆಂಗಳೂರಿಗೆ ಇವರ ಆಳ್ವಿಕೆ ಸೀಮಿತವಾಗದೆ ಇಡೀ ದಕ್ಷಿಣ ಕರ್ನಾಟಕ ವ್ಯಾಪ್ತಿಗೆ ಇವರು ಆಡಳಿತ ನಡೆಸಿದರು. ಕೆಂಪೇಗೌಡರು ಸಾರ್ವಜನಿಕರ ಏಳಿಗೆಗೆ ಶ್ರಮಿಸಿದವರು ಎಂದು ಇವರ ಶಾಸನಗಳಿಂದ ತಿಳಿದು ಬರುತ್ತದೆ ಎಂದು ಹೇಳಿದರು. ಇವರ ಶಾಸನಗಳ ಅಧ್ಯಯನದಿಂದ ಇವರ ಆಡಳಿತದ ಬಗ್ಗೆ ಹೆಚ್ಚು ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಅವರು ತಿಳಿಸಿದರು. 

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ಮಾತನಾಡಿ ಅನೇಕ ವರ್ಷಗಳಿಂದ ಕೆಲವು ಸ್ಥಳಗಳಿಗೆ ಸೀಮಿತವಾಗದೆ ಕೆಂಪೇಗೌಡರ ಜಯಂತಿಯು ಇಂದು ಇಡೀ ರಾಜ್ಯದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಧರ್ಮಾತೀತವಾಗಿ ನಾಡನ್ನು ಕಟ್ಟುವಂತಹ ಕೆಲಸ ಮಾಡಿದವರ ಜಯಂತಿಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. 

Advertisement

ಕೊಡಗು ಜಿ.ಪಂ. ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್‌ ಅವರು ಮಾತನಾಡಿ, ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಆಡಳಿತ ನಡೆಸಿದರು. ಸುಮಾರು 400 ಕೆರೆಗಳನ್ನು ನಿರ್ಮಿಸಿದರು. ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದ ಮಹಾನ್‌ ಆಡಳಿತಗಾರರು ಎಂದು ನುಡಿದರು. 

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್‌.ಲೋಕೇಶ್‌ ಸಾಗರ್‌ ಅವರು ಮಾತನಾಡಿ ಕೆಂಪೇಗೌಡರು ದೇಶದ ಹೆಸರನ್ನು ವಿಶ್ವ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿ ದ್ದಾರೆ. ಇವರಿಂದಾಗಿ ಬೆಂಗಳೂರು ನಗರವು ವಿಶ್ವ ಮಟ್ಟದಲ್ಲಿ ಹೆಸರನ್ನು ಗಳಿಸಿದೆ ಎಂದು ನುಡಿದರು.

ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಟಿ.ಪಿ. ರಮೇಶ್‌  ಮಾತನಾಡಿ, ನಾಡಿಗಾಗಿ ಸೇವೆ ಮಾಡಿ ನಾಡನ್ನು ಕಟ್ಟಿ ಬೆಳೆಸಿದ ದೊರೆ, ಬೆಂಗಳೂರಿನಲ್ಲಿ ಇರುವ ಕೆರೆಗಳು ಇವರ ಕಾಲದಲ್ಲಿ ನಿರ್ಮಾಣವಾಗಿ ಕೃಷಿಗೆ, ಕುಡಿಯುವ ನೀರಿಗೆ ಅನುಕೂಲವಾಗುವಂತೆ ಮಾಡಿದರು. ನಾಲ್ಕು ದಿಕ್ಕಿನಲ್ಲಿ ಗಡಿ ಗುರುತು ಮಾಡಿ ವೃತ್ತಿಗೆ ಸಂಬಂಧಿಸಿದಂತಹ ಪಟ್ಟಣಗಳನ್ನು ನಿರ್ಮಾಣ ಮಾಡಿದರು. ಕೆಂಪೇಗೌಡರ ದೂರದೃಷ್ಟಿಯಿಂದ ಸಾಕಷ್ಟು ಸುಧಾರಣೆಗಳು ಕಾಣಸಿಗುತ್ತವೆ. ಕೆಂಪೇಗೌಡರ ವ್ಯಕ್ತಿತ್ವವು ಇತರರಿಗೆ ಆದರ್ಶ ಪ್ರಾಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯರಾದ ಎಂ.ಪಿ.ಸುನೀಲ್‌ ಸುಬ್ರಮಣಿ ಅವರು,  ಇಂದಿನ ವಿದ್ಯಾರ್ಥಿಗಳು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇದರಿಂದ ಅವರ ಜ್ಞಾನ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿ ಯುವಜನರಿಗೆ ಕೆಂಪೇಗೌಡರಂತಹ ವ್ಯಕ್ತಿತ್ವವು ಅವರ ಜೀವನಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ನುಡಿದರು.

ಮೈಸೂರಿನ ರಾಘವೇಂದ್ರ ಅವರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಇಂಪು ನೀಡಿತು. ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಮುಖಂಡರಿಗೆ ಸಮ್ಮಾನಿಸಲಾಯಿತು. ಡಿಸಿ ಡಾ| ರಿಚರ್ಡ್‌ ವಿನ್ಸೆಂಟ್‌ ಡಿ’ಸೋಜಾ, ಎಸ್‌ಪಿ ಪಿ. ರಾಜೇಂದ್ರ ಪ್ರಸಾದ್‌ ಮೊದಲಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next