ಮಡಿಕೇರಿ : ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭ ನಗರಸಭೆೆಯ ಕೆಲವು ಸಿಬಂದಿ ಗೋಲ್‌ಮಾಲ್ ಮಾಡಿದ್ದಾರೆ ಎನ್ನುವ ಆರೋಪ ನಗರಸಭೆೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತಲ್ಲದೆ, ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆ ಬಹಿರಂಗಗೊಂಡಿತು.
ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಗರ ಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾ ಪಿಸಿದ ಕಾಂಗ್ರೆಸ್ ಸದಸ್ಯ ಹೆಚ್.ಎಂ.ನಂದ ಕುಮಾರ್, ಮಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರ ತಮ್ಯ ತೋರಲಾಗಿದೆ. ಅಲ್ಲದೆ, ಸಿಬ್ಬಂದಿಯೊಬ್ಬರು ಪರಿಹಾರದ ಚೆಕ್‌ನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಂಬಂಧಿಸಿದ ಸಿಬಂದಿಯನ್ನು ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಪೌರಾಯುಕ್ತ ರಮೇಶ್, ಈ ಪ್ರಕರಣ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದ್ದು, ಅಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದರು. ಅಧಿಕಾರಿ ಜೀವನ್ ಎಂಬವರು ಕರ್ತವ್ಯ ಲೋಪ ತೋರುತ್ತಿದ್ದು, ಮಳೆಹಾನಿ ಪರಿಹಾರ ಚೆಕ್ ವಿತರಣೆ ವಿಚಾರದಲ್ಲಿ ತೊಂದರೆ ನೀಡಿದ್ದಾರೆ. ಮುತ್ತಮ್ಮ ಎಂಬ ಹೆಸರಿನ ಇಬ್ಬರು ಸಂತ್ರಸ್ತರ ಹೆಸರಿನಲ್ಲಿ ಮಂಜೂರಾದ ಚೆಕ್‌ನಲ್ಲಿ ಒಂದು ಚೆಕ್‌ನ್ನು ದುರುಪಯೋಗಪಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಕುರಿತು ಚರ್ಚೆ ನಡೆದ ಸಂದರ್ಭ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣನ್ ಸಂಬಂಧಿಸಿದ ಸಿಬಂದಿ ಗಳನ್ನು ಸಭೆಗೆ ಕರೆಯಿಸುವಂತೆ ಒತ್ತಾಯಿ ಸಿದರು. ಸಭೆಗೆ ಸಿಬಂದಿ ಆಗಮಿಸಿದ ನಂತರ ಪೌರಾಯುಕ್ತರು ಜೀವನ್ ವಿರುದ್ಧ ಗಂಭೀರ ಆರೋಪ ಗಳನ್ನು ಮಾಡಿದರು. ಸದಸ್ಯ ನಂದ ಕುಮಾರ್ ಕೂಡ ಸಿಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಿಬಂದಿ ಜೀವನ್, ಪರಿಹಾರದ ಚೆಕ್ ವಿತರಣೆಯಲ್ಲಿ ಯಾವುದೇ ಲೋಪವಾಗಿಲ್ಲ, ನಾನು ಹಣವನ್ನು ಡ್ರಾ ಮಾಡಿಲ್ಲ, ತಹಶೀಲ್ದಾರ್ ಸೂಚನೆಯಂತೆ ಕಾರ್ಯ ನಿರ್ವಹಿಸಿದ್ದೇನೆ ಎಂದು ಸಮಜಾಯಿಷಿಕೆ ನೀಡಿದರು.
ಸಿಬಂದಿ ವಿರುದ್ಧ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದ ಸಂದ ರ್ಭ ಮಧ್ಯ ಪ್ರವೇಶಿಸಿದ ನಗರಸಭಾ ಕಾರ್ಯದರ್ಶಿ ತಾಹಿರ್, ಈ ಬೆಳವಣಿಗೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಯಾರು ತಪ್ಪು ಮಾಡಿದ್ದಾರೋ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಗಾಗುವುದು ಎಂದರು.
ಅದೇ ಕಸ, ಅದೇ ರಸ್ತೆ
ಪ್ರತಿ ಸಭೆಯಂತೆ ಈ ಸಭೆಯಲ್ಲಿಯೂ ಕಸ ವಿಲೇವಾರಿ, ಯುಜಿಡಿ ಕಾಮಗಾರಿಯಿಂದ
ಹದಗೆಟ್ಟ ರಸ್ತೆ, ತಡೆಗೋಡೆ ನಿರ್ಮಾಣ ಮಳೆಹಾನಿ ಪರಿಹಾರ ಕಾರ್ಯ ವಿಳಂಬದ ಬಗ್ಗೆ ಸದಸ್ಯರು ಅಧ್ಯಕ್ಷರ ಗಮನ ಸೆಳೆದರು.
ನಗರದೊಳಗೆ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳು
ನಡೆಯುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಅಧ್ಯಕ್ಷರಿಗೆ ಹಿಡಿತ ಇಲ್ಲದಿರುವುದೆ ಕಾರಣವೆಂದು ಬಿಜೆಪಿ ಸದಸ್ಯರು ಆರೋಪಿಸಿದರು. ನಗರದ ಕಸವಿಲೇವಾರಿ ಆಗುತ್ತಿರುವ ಸ್ಟೋನ್ ಹಿಲ್ ಬೆಟ್ಟ ಪ್ರದೇಶದಲ್ಲಿ ಕಸದ ರಾಶಿಯ ಮೇಲೆ ಮಣ್ಣನ್ನು ಸುರಿದಿರುವ ಬಗ್ಗೆ ಸದಸ್ಯ ಪಿ.ಡಿ. ಪೊನ್ನಪ್ಪ ಆಕ್ಷೇಪ ವ್ಯಕ್ತಪಡಿಸಿದರು.