Advertisement
ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ, ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ವಿದ್ಯುತ್ ತಂತಿ ಬಿದ್ದು ಹಸುವೊಂದು ಮೃತಪಟ್ಟಿದೆ.
Related Articles
Advertisement
ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ಬಿದ್ದು, ವಿದ್ಯುತ್ ಪ್ರವಹಿಸಿ 3 ತಿಂಗಳ ಗಬ್ಬದ ಹಸು ಸಾವಿಗೀಡಾಗಿರುವ ಘಟನೆ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಸುರೇಶ್ ಎಂಬುವವರಿಗೆ ಸೇರಿದ ಹಸು ಇದಾಗಿದೆ.ಶನಿವಾರಸಂತೆ ಹೋಬಳಿಯ ಗೌಡಳ್ಳಿ ಗ್ರಾ.ಪಂ ವ್ಯಾಪ್ತಿಯ ಚನ್ನಾಪುರ ಗ್ರಾಮದ ನಿವಾಸಿ ಲಕ್ಷ್ಮೀ ಎಂಬುವವರಿಗೆ ಸೇರಿದ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ.
ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯ ಅತ್ತೂರು ಗ್ರಾಮದಲ್ಲಿ ಜನಾರ್ಧನ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದೆ. ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಗುಡ್ಡೆಹೊಸೂರು ಗ್ರಾ.ಪಂ ಅಧಿಕಾರಿ ಸುಮೇಶ್, ಕಂದಾಯ ನಿರೀಕ್ಷಕ ಸಂತೋಷ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಗೌತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳಾಂತರಸಂಪಾಜೆ ಹೋಬಳಿಯ ಮೇಕೇರಿ ಗ್ರಾಮದ ಆಯಿಷಾ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಉಳಿದ ಭಾಗ ಬಿರುಕು ಬಿಟ್ಟಿದೆ. ಇಲ್ಲಿ ವಾಸ ಇದ್ದವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಹಲವು ಗ್ರಾಮಗಳು ವಿದ್ಯುತ್ ಕೊರತೆ ಎದುರಿಸುತ್ತಿವೆ. ಅತಿಹೆಚ್ಚು ಮಳೆಯಾಗುವ ಕಾವೇರಿಯ ಉಗಮ ಸ್ಥಾನ ತಲಕಾವೇರಿ, ಭಾಗಮಂಡಲ ಮತ್ತು ನಾಪೋಕ್ಲು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ಯಾವುದೇ ಹಾನಿಗಳು ಸಂಭವಿಸಿಲ್ಲ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಿಧಾನವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಡಿಕೇರಿ ನಗರ, ಗಾಳಿಬೀಡು, ಕಾಲೂರು, ಮುಕ್ಕೋಡ್ಲು, ಬೆಟ್ಟಗೇರಿ, ಬಿಳಿಗೇರಿ, ಕರಿಕೆ, ಪೆರಾಜೆ, ಸಂಪಾಜೆ, ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಹಾರಂಗಿ, ಕೂಡಿಗೆ, ಸೋಮವಾರಪೇಟೆ, ಮಾದಾಪುರ, ಶಾಂತಳ್ಳಿ ಮತ್ತು ಶ್ರೀಮಂಗಲ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತಿಹೆಚ್ಚು ಐದೂವರೆ ಇಂಚಿಗೂ ಅಧಿಕ ಮಳೆಯಾಗಿದೆ. ನಾಪೋಕ್ಲುವಿನಲ್ಲಿ ಮೂರೂವರೆ ಇಂಚು ಮಳೆಯಾಗಿದೆ. ಮಡಿಕೇರಿ ನಗರದಲ್ಲಿ ಮಂಜು ಸಹಿತ ಮೈಕೊರೆಯುವ ಚಳಿ ಇದ್ದು, ನಿರಂತರ ಗಾಳಿ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ, ಬೆಟ್ಟ ಪ್ರದೇಶದಲ್ಲಿ ಆತಂಕ
ಜಿಲ್ಲೆಯಲ್ಲಿ ನಿರತಂತರವಾಗಿ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಬೆಟ್ಟಗುಡ್ಡ, ತಗ್ಗು ಪ್ರದೇಶ ಮತ್ತು ನದಿಯ ಆಸುಪಾಸಿನಲ್ಲಿರುವ ನಿವಾಸಿಗಳು ಆತಂಕಗೊಂಡಿದ್ದಾರೆ. ಸ್ಥಳೀಯ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್ ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಆಡಳಿತ ಸನ್ನದ್ಧವಾಗಿರಬೇಕೆಂದು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.