ಮಡಿಕೇರಿ: ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದ ಬಂದೋಬಸ್ತ್ ಗಾಗಿ 4 ಮಂದಿ ಡಿ.ವೈ.ಎಸ್.ಪಿಗಳ ನೇತೃತ್ವದಲ್ಲಿ ಒಟ್ಟು 700 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದ್ದು, ಶಾಂತಿಯುತ ದಸರಾ ಆಚರಣೆಗೆ ಕೊಡಗು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಡಿಕೇರಿ ದಸರಾಕ್ಕೆ 60ರಿಂದ 80 ಸಾವಿರ ಮಂದಿ ಹಾಗೂ ಗೋಣಿಕೊಪ್ಪಕ್ಕೆ 15 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ದಶ ಮಂಟಪಗಳ ಶೋಭಾ ಯಾತ್ರೆ ತೆರಳುವ ಸಂದರ್ಭ ಜನ ದಟ್ಟಣೆ ಏರ್ಪಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಬಂದೋಬಸ್ತ್ ಕರ್ತವ್ಯಕ್ಕಾಗಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿಯನ್ನು ನಿಯೋಜನೆ ಮಾಡಲಾಗುತ್ತಿದ್ದು, ಭದ್ರತೆಯ ಕುರಿತು ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಬಂದೋಬಸ್ತ್ಗಾಗಿ 4 ಡಿ.ವೈ.ಎಸ್.ಪಿ 15 ಸಿಪಿಐ, 24 ಪಿ.ಎಸ್.ಐ, ಎ.ಎಸ್.ಐ ಮತ್ತು 700 ಮಂದಿ ಪೊಲೀಸ್ ಸಿಬಂದಿಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ದಸರಾದಲ್ಲಿ ಪಾಲ್ಗೊಳ್ಳುವುದರಿಂದ ಆಯಕಟ್ಟಿ ಸ್ಥಳಗಳಲ್ಲಿ 100 ಮಂದಿ ಮಹಿಳಾ ಕೂಡ ನಿಯೋಜಿಸಲಾಗುತ್ತಿದೆ. ಮಾತ್ರವಲ್ಲದೇ 200 ಗೃಹ ರಕ್ಷಕರು, ಕೆ.ಎಸ್.ಆರ್.ಪಿಯ 3 ತುಕಡಿ, ಡಿ.ಎ.ಆರ್ 13 ತುಕಡಿಗಳನ್ನು ನೇಮಿಸಲಾಗುತ್ತಿದೆ. ಇದಲ್ಲದೆ ದಸರ ಕಾರ್ಯಕ್ರಮದ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ವಿಧ್ವಂಸಕ ತಪಾಸಣಾ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಡಿಕೇರಿ ನಗರ ಮತ್ತು ಗೋಣಿಕೊಪ್ಪದಲ್ಲಿ ನಡೆಯಲಿರುವ ಆಯುಧ ಪೂಜೆ, ದಸರಾದ ಸಂಬಂಧ ಅ.7 ರ ಬೆಳಗ್ಗೆ 6 ಗಂಟೆಯಿಂದ ಅ.9 ರ ಬೆಳಗ್ಗೆ 10 ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ 10 ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಅ.7 ರ ಮಧ್ಯರಾತ್ರಿಯಿಂದ ಅ.9 ರ ಬೆಳಗ್ಗೆ 10 ಗಂಟೆಯವರೆಗೆ ಗೋಣಿಕೊಪ್ಪ ನಗರ ಹಾಗೂ ಗೋಣಿಕೊಪ್ಪದ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿರುವ ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
10 ಜೀಪು 12 ಬೈಕ್‌ಗಳಲ್ಲಿ ಸಿಬಂದಿ
ನಗರದ ಹೊರ ವಲಯದಲ್ಲಿ ಗಸ್ತು ಕರ್ತವ್ಯಕ್ಕಾಗಿ 10 ಜೀಪುಗಳಲ್ಲಿ ಮತ್ತು 12 ಬೈಕ್‌ಗಳ ಸಿಬಂದಿಯನ್ನು ನೇಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಮಡಿಕೇರಿ ಮತ್ತು ಗೋಣಿಕೊಪ್ಪದ ಜನ ನಿಬಿಡ ಪ್ರದೇಶಗಳಲ್ಲಿ ಒಟ್ಟು 40 ಸಿ.ಸಿ.ಕೆಮರಾ ಅಳವಡಿಕೆ, ನಗರದಲ್ಲಿ ವಿಡಿಯೋ ಚಿತ್ರಿಕರಣಕ್ಕಾಗಿ 17 ವಿಡಿಯೋಗ್ರಾಫರ್‌ಗಳನ್ನು ನೇಮಿಸಲಾಗುತ್ತದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕಾಗಿ 7 ರ್‍ಯಾಂಬೋ ತಂಡವನ್ನು ನೇಮಿಸಲಾಗುತ್ತದೆ. ಈ ತಂಡ ಗುಂಪು ಘರ್ಷಣೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಎಸ್.ಪಿ. ತಿಳಿಸಿದರು. ದಸರಾ ದಿನದಂದು ನಗರದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಲಿದ್ದು ಈ ಸಂದರ್ಭದಲ್ಲಿ ಪಿಕ್‌ಪಾಕೆಟ್, ಸರಗಳ್ಳತನ, ಮಹಿಳೆಯರನ್ನು ಚುಡಾಯಿಸುವುದು ಮತ್ತಿತರ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಮಫ್ತಿಯಲ್ಲಿ ಅಪರಾಧ 7 ತಂಡಗಳನ್ನು ರಚಿಸಲಾಗಿದೆ ಎಂದರು.