Advertisement

ಐತಿಹಾಸಿಕ ದಸರಾ ಮಹೋತ್ಸವಕ್ಕೆ ಮಡಿಕೇರಿ ಸಜ್ಜು

09:03 PM Sep 28, 2019 | Team Udayavani |

ಮಡಿಕೇರಿ: ಐತಿಹಾಸಿಕ ದಸರಾ ಮಹೋತ್ಸವಕ್ಕೆ ಮಡಿಕೇರಿ ಸಜ್ಜಾಗುತ್ತಿದೆ. ಸೆ. 29ರಂದು ಕರಗೋತ್ಸವ ಆರಂಭಗೊಳ್ಳಲಿದ್ದು, ಸೆ. 30ರಿಂದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಿಸಲಿವೆ ಎಂದು ದಸರಾ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈ ವರ್ಷ ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಆದ್ಯತೆ ನೀಡಲಾಗುತ್ತಿದ್ದು, ವರ್ತಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಜಿಲ್ಲೆ ಹಾಗೂ ಹೊರ ಜಿಲ್ಲೆ, ರಾಜ್ಯಗಳ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರಚಾರದ ಭಿತ್ತಿಪತ್ರಗಳನ್ನು ಹಾಕಲಾಗಿದೆ ಎಂದರು.

ರಸ್ತೆಗಳ ದುರಸ್ತಿ
ಮಹಾಮಳೆಯಿಂದ ಹಾಳಾಗಿರುವ ರಸ್ತೆಗಳ ದುರಸ್ತಿ ನಡೆಯುತ್ತಿದ್ದು, ದಶಮಂಟಪಗಳ ಮೆರವಣಿಗೆಗೆ ಯಾವುದೇ ಅಡಚಣೆಯಾಗಲಾರದು ಎಂದು ರಾಬಿನ್‌ ದೇವಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿಯ ದಸರಾ ಅನುದಾನ ಇನ್ನೂ ಕೈ ಸೇರಿಲ್ಲ, ಆದರೆ ಈ ಬಾರಿ ಮುಂಚಿತವಾಗಿ ಅನುದಾನ ದೊರೆತಿದೆ ಎಂದರು.

ಅ. 2: ಮಕ್ಕಳ‌ ದಸರಾ
ರವಿವಾರ ಮಡಿಕೇರಿ ದಸರಾ ಜನೋತ್ಸವಕ್ಕೆ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವದ ಮೂಲಕ ಚಾಲನೆ ದೊರೆಯಲಿದೆ. ಸೋಮವಾರ ದೇವಿಯ ಪೂಜೆಯೊಂದಿಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಅ. 2ರಂದು ಮಕ್ಕಳ‌ ದಸರಾ ಆಕರ್ಷಿಸಲಿದ್ದು, ಗಾಂಧಿ ಮೈದಾನದಲ್ಲಿ ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ. 3ರಂದು ಜನಪದ ಉತ್ಸವವನ್ನು ಆಯೋಜಿಸಲಾಗಿದೆ.

ಅ. 5ರಂದು ಯುವ ದಸರಾ ಪ್ರಯುಕ್ತ ನಗರದ ಬನ್ನಿ ಮಂಟಪದಿಂದ ಬೈಕ್‌ ಸ್ಟಂಟ್‌ ನಡೆಯಲಿದೆ. ಹಳೇ ವಿಂಟೇಜ್‌ ವಾಹನಗಳ ಪ್ರದರ್ಶನ ನಡೆಯಲಿದೆ. ಅ. 8ರಂದು ದಶಮಂಟಪಗಳ ವರ್ಣರಂಜಿತ ಶೋಭಾಯಾತ್ರೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next