Advertisement

ಮಡಿಕೇರಿ ಪರ್ಯಾಯ ರಸ್ತೆ: ನ.ಪಂ. ವ್ಯಾಪ್ತಿಯಲ್ಲಿ ದುರಸ್ತಿಗೆ ಆಗ್ರಹ 

11:50 AM Aug 31, 2018 | Team Udayavani |

ಸುಳ್ಯ: ಸುಳ್ಯ-ಮಡಿಕೇರಿ ಪರ್ಯಾಯ ರಸ್ತೆಯಾಗಿ ಬಳಕೆಯಲ್ಲಿರುವ ಸುಳ್ಯ-ಆಲೆಟ್ಟಿ-ಕರಿಕೆ ರಸ್ತೆಯಲ್ಲಿನ ಸುಳ್ಯ ನಗರ ವ್ಯಾಪ್ತಿಯಲ್ಲಿ ದುರಸ್ತಿಗಾಗಿ ಮಳೆ ಹಾನಿ ಯೋಜನೆಯಡಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ಣಯ ಮಾಡಿ ಕಳುಹಿಸಲು ನಿರ್ಧರಿಸಲಾಗಿದೆ. 

Advertisement

ನ.ಪಂ.ಸಾಮಾನ್ಯ ಸಭೆಯು ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನ.ಪಂ. ಸಭಾಂಗಣದಲ್ಲಿ ನಡೆಯಿತು. ಸದಸ್ಯ ಗೋಕುಲ್‌ದಾಸ್‌, ಕೆ.ಎಂ. ಮುಸ್ತಾಪ ಅವರು, ಮುಖ್ಯ ರಸ್ತೆಯ ತಿರುವಿನಿಂದ ನಾಗಪಟ್ಟಣ ಸೇತುವೆ ತನಕ ರಸ್ತೆ ಅವ್ಯವಸ್ಥೆ ಕುರಿತು ಪ್ರಸ್ತಾವಿಸಿದರು. ರಸ್ತೆಗೆ ತಾಗಿಕೊಂಡು ಹಾಕಿರುವ ಬೇಲಿ ತೆರವುಗೊಳಿಸಬೇಕು. ಎರಡು ವರ್ಷಗಳಿಂದ ಈ ಬಗ್ಗೆ ಮಾತನಾಡುತ್ತಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದು ಗೋಕುಲ್‌ದಾಸ್‌ ಹೇಳಿದರು. ಮಳೆ ಹಾನಿಯಡಿ ಅನುದಾನ ನೀಡಲು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಬೇಲಿ ತೆರವಿನ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಂಜಿನಿಯರ್‌ ಭರವಸೆ ನೀಡಿದರು.

ಸ್ವಚ್ಛತಾ ಬೋರ್ಡ್‌ ಬಿಲ್‌ ದುಬಾರಿ..!
ನಗರದ ಆಯ್ದ ಭಾಗದಲ್ಲಿ ಅಳವಡಿಲು ಉದ್ದೇಶಿಸಿರುವ 10 ಸ್ವಚ್ಛತಾ ಬೋರ್ಡ್‌ಗೆ ವ್ಯಯಿಸಿದ ವೆಚ್ಚ ದುಬಾರಿ ಆಗಿರುವ ಬಗ್ಗೆ ಸದಸ್ಯರು ಉಲ್ಲೇಖೀಸಿದರು. ಪ್ರತಿ ಬೋರ್ಡ್‌ಗೆ 3ಸಾವಿರ ರೂ. ವೆಚ್ಚ ಎಂದು ನಿಗದಿಪಡಿಸ ಲಾಗಿದೆ. ಹೆಚ್ಚೆಂದರೆ 750 ರೂ. ಇರಬಹುದು ಎಂದು ಉಮ್ಮರ್‌, ಗೋಕುಲ್‌ ದಾಸ್‌ ಮೊದಲಾದವರು ಹೇಳಿದರು. ಅಸಲು ವೆಚ್ಚ ಮಾತ್ರ ಪಾವತಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.

5 ಸೆಂಟ್ಸ್‌ ಮಾಯ..!
ಜಯನಗರ ಹಿಂದೂ ರುದ್ರಭೂಮಿಗೆ ಮೀಸಲಿರಿಸಿದ ಒಟ್ಟು ಜಮೀನಿನಲ್ಲಿ 5 ಸೆಂಟ್ಸ್‌ ಇಲ್ಲದಿರುವ ಬಗ್ಗೆ ಗೋಕುಲ್‌ ದಾಸ್‌ ಪ್ರಶ್ನಿಸಿದರು. ಸಹಾಯಕ ಆಯುಕ್ತರ ಮೂಲಕವೇ ವಿಭಜನೆ ಆಗಿದೆ ಎಂದು ಮುಖ್ಯಾಧಿಕಾರಿ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಗೋಕುಲ್‌, ಹಾಗೆ ಸಾಧ್ಯವಿಲ್ಲ. ಪಹಣಿಯಲ್ಲಿ ದಾಖಲಿಸಿರುವ ಸರಕಾರಿ ಭೂಮಿ ಬೇರೊಬ್ಬರಿಗೆ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಅನುದಾನ ನೀಡಲು ಆಗ್ರಹ
ನ.ಪಂ.ಸಾರ್ವಜನಿಕ ದೇಣಿಗೆ ನಿಧಿಯಿಂದ ದುಗಲಡ್ಕ ಸಾಹಿತ್ಯ ಸಮ್ಮೇಳನ ಸೇರಿದಂತೆ ಬೇರೆ-ಬೇರೆ ಕಾರ್ಯಕ್ರಮಗಳಿಗೆ ನ.ಪಂ. ಘೋಷಿಸಿದ ಅನುದಾನ ಬಿಡುಗಡೆಯಾಗಿಲ್ಲ ಎಂದು ಗೋಕುಲ್‌ದಾಸ್‌ ಸಹಿತ ಇತರ ಸದಸ್ಯರು ಪ್ರಶ್ನಿಸಿದರು. ಜಿಲ್ಲಾಧಿಕಾರಿ ಅವರ ಅನುಮೋದನೆ ಬಳಿಕ ನೀಡುವುದಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಕೆಲ ಕಾಲ ಚರ್ಚೆ ನಡೆದು ವಿಳಂಬಕ್ಕೆ ಕಾರಣರಾದ ಪಿಡಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

Advertisement

ಕಾಲೇಜು ಸ್ಥಳಾಂತರಿಸಿ..!
ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜು ನಗರದಿಂದ ಮೂರು ನಾಲ್ಕು ಕಿ.ಮೀ. ಒಳಭಾಗದಲ್ಲಿದೆ. ನಗರದಲ್ಲಿ ಬೇಕಾದಷ್ಟು ಸರಕಾರಿ ಜಮೀನು ಇರುವ ಕಾರಣ ಇಲ್ಲಿಯೇ ಜಾಗ ಕಾದಿರಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ ಎಂದು ಉಮ್ಮರ್‌ ಹೇಳಿದರು. ಜಾಗ ಕಾದಿರಿಸಿ ಸ್ಥಳಾಂತರಿಸುವುದು ಕಷ್ಟ. ಈಗಿರುವ ಕಾಲೇಜಿಗೆ ಹೆಚ್ಚುವರಿ ಬಸ್‌ ಸಂಚರಿಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಗೋಪಾಲ ನಡುಬೈಲು ಸಲಹೆ ನೀಡಿದರು. ಗಾಂಧಿನಗರ ಮೊದಲಾದೆಡೆ ಹೋರಿಯೊಂದು ವಾಹನ, ಜನರ ಮೇಲೆ ದಾಳಿ ಮಾಡುತ್ತಿದ್ದು, ಅದರ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಉಮ್ಮರ್‌, ಪ್ರೇಮಾ ಅವರು ಆಗ್ರಹಿಸಿದರು.

ಪುರಭವನ ದುರಸ್ತಿ ಪಡಿಸಿ
ಪುರಭವನದಲ್ಲಿ ಮೂಲ ಸೌಕರ್ಯ ಕೊರತೆ ಇದ್ದು, ಅದರ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮುಸ್ತಾಪ, ಪ್ರೇಮಾ ಟೀಚರ್‌, ಶ್ರೀಲತಾ ಮೊದಲಾದವರು ಆಗ್ರಹಿಸಿದರು. ಆಯಾ ವಾರ್ಡ್‌ಗಳಲ್ಲಿ ಕಾಮಗಾರಿ ಅನುಷ್ಠಾನ ಮಾಡುವ ಸಂದರ್ಭ ವಾರ್ಡ್‌ ಸದಸ್ಯರ ಗಮನಕ್ಕೆ ತರಬೇಕು ಎಂದು ಉಮ್ಮರ್‌ ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next