ರಾಯಚೂರು: ಮಾದಿಗ ಸಮುದಾಯದ ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ತಡೆಯಲು ಸಂವಿಧಾನ ಜಾತಿ ನಿಂದನೆ ಕಾಯ್ದೆಯಡಿ ದೂರು ದಾಖಲಿಸಲು ಅವಕಾಶ ನೀಡಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಬಿ. ತಿಮ್ಮಾಪುರ ಅಭಿಪ್ರಾಯಪಟ್ಟರು.
ನಗರದ ಪಂ| ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಜ್ಯ ಮಾದಿಗ ಮಹಾಸಭಾದಿಂದ ಶನಿವಾರ ಏರ್ಪಡಿಸಿದ್ದ ಮಾದಿಗ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇಂದು ಕೆಲವರು ವೈಯಕ್ತಿಕ ಹಿತಕ್ಕಾಗಿ ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇಡೀ ಸಮುದಾಯದ ಬಗ್ಗೆ ತಪ್ಪು ಕಲ್ಪನೆ ಬರುವಂತಾಗಿದೆ. ಸಕಾರಣಗಳಿದ್ದಲ್ಲಿ ಬಳಸಿಕೊಳ್ಳಬೇಕು ಎಂದರು.
ಮಾದಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಇಂದು ಎಲ್ಲ ಪಕ್ಷಗಳಿಗೆ ಮಾದಿಗ ಸಮುದಾಯ ಮತ ಬ್ಯಾಂಕ್ ಆಗುತ್ತಿದೆ. ರಾಜಕೀಯ ಸ್ಥಾನಮಾನ ಸಿಕ್ಕಲ್ಲಿ ಹಕ್ಕುಗಳನ್ನು ಸುಲಭವಾಗಿ ಪಡೆಯಬಹುದು. ಈ ನಿಟ್ಟಿನಲ್ಲಿ ಸಮುದಾಯದವರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದರು.ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಇದ್ದಾಗ ಸದಾಶಿವ ಆಯೋಗ ರಚಿಸಲಾಗಿತ್ತು. ಆಯೋಗ ರಚನೆಗೆ ಅನೇಕ ನಾಯಕರು ಶ್ರಮಿಸಿದ್ದಾರೆ. ಮಾದಿಗ ಸಮುದಾಯದ ಹಕ್ಕು ಪಡೆಯಲು ವಿಧಾನಸೌಧ ಮುತ್ತಿಗೆ ಹಾಕಿ ಸರ್ಕಾರಕ್ಕೆ ಎಚ್ಚರಿಸಲಾಗುವುದು ಎಂದರು.
ಶಾಸಕ ಡಾ| ಶಿವರಾಜ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಎಸ್. ಬೋಸರಾಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಹೋರಾಟಗಾರ ಎಸ್.ಮಾರೆಪ್ಪ ವಕೀಲ ಮತ್ತು ಕೆಪಿಸಿಸಿ ವಕ್ತಾರ ಎ.ವಸಂತಕುಮಾರ ಮಾತನಾಡಿದರು. ಮಹಾಸಭಾದ ತಾಲ್ಲೂಕು ಅಧ್ಯಕ್ಷ ಪಿ.ಯಲ್ಲಪ್ಪ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ನಗರಸಭೆ ಅಧ್ಯಕ್ಷ ಈ ವಿನಯಕುಮಾರ, ಸದಸ್ಯ ಜಯಣ್ಣ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಎಂ.ವಿರುಪಾಕ್ಷಿ, ಜೆ.ಬಿ.ರಾಜು, ಮಹಾಸಭಾದ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಕೊಡ್ಲಿ ಇದ್ದರು. ನರಸಪ್ಪ ಭಂಡಾರಿ ನಿರೂಪಿಸಿದರು.