ಭೋಪಾಲ್/ಜೈಪುರ: ಮಧ್ಯಪ್ರದೇಶದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಉಳಿ ಯುತ್ತದೋ, ಪತನವಾಗಲಿದೆಯೋ ಎಂಬ ಪ್ರಶ್ನೆಗೆ ಸೋಮವಾರ ಉತ್ತರ ಸಿಗಲಿದೆ. 22 ಶಾಸಕರು ರಾಜೀನಾಮೆ ನೀಡಿರುವ ಕಾರಣ ಸರಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಲಾಲ್‌ಜಿ ಟಂಡನ್ ಅವರು ವಿಶ್ವಾಸಮತ ಸಾಬೀತು ಮಾಡುವಂತೆ ಸೂಚನೆ ನೀಡಿದ್ದು, ಸೋಮವಾರ ಮಧ್ಯಪ್ರದೇಶ ವಿಧಾನ ಸಭೆಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಅದಕ್ಕೆ ಪೂರಕವಾಗಿ ಭೋಪಾಲ್‌ನಲ್ಲಿ ರವಿವಾರ ಸಚಿವ ಸಂಪುಟ ಸಭೆಯನ್ನೂ ಸಿಎಂ ಕಮಲ್‌ನಾಥ್ ನಡೆಸಿದ್ದಾರೆ. ವಿಶ್ವಾಸಮತ ಪ್ರಕ್ರಿಯೆಯಲ್ಲಿ ಜಯ ಸಾಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವಿಧಾನ ಸಭೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಹಾಕಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಭೋಪಾಲಕ್ಕೆ ಆಗಮನ: ಬಿಜೆಪಿಯಿಂದ ಮತ್ತಷ್ಟು ಸಂಖ್ಯೆಯಲ್ಲಿ ಶಾಸಕರು ಆಮಿಷಕ್ಕೆ ಒಳಗಾಗದೇ ಇರುವುದನ್ನು ತಪ್ಪಿಸಲು ಜೈಪುರದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ತನ್ನ ಶಾಸಕರನ್ನು ಭೋಪಾಲಕ್ಕೆ ಕಾಂಗ್ರೆಸ್ ಕರೆ ತಂದಿದೆ. ‘ಭೋಪಾಲ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ನಮ್ಮನ್ನು ಹೊಟೇಲ್‌ಗಳಿಗೆ ಕರೆದೊ ಯ್ಯಲಾಗಿದೆ. ರಾಜ್ಯದ ಬಜೆಟ್ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ’ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ್ದಾರೆ. ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಇಂದು ಸ್ಪೀಕರ್ ರೂಲಿಂಗ್: ಮಧ್ಯಪ್ರದೇಶ ರಾಜ್ಯಪಾಲ ಲಾಲ್‌ಜಿ ಟಂಡನ್ ಆದೇಶ ಪ್ರಕಾರ ಕಮಲ್‌ನಾಥ್ ಸರಕಾರದ ವಿಶ್ವಾಸ ಮತ ಯಾಚನೆಗೆ ಸಂಬಂಧಿಸಿದಂತೆ ಆದೇಶ ನೀಡಲು ಸ್ಪೀಕರ್ ಎನ್.ಪಿ. ಪ್ರಜಾಪತಿ ನಿರಾ ಕರಿಸಿದ್ದಾರೆ. ಸೋಮವಾರವೇ ರೂಲಿಂಗ್ ನೀಡುವುದಾಗಿ ಹೇಳಿದ್ದಾರೆ.
ಸಿಂಧಿಯಾ ಇಂದು ಆಗಮನ: ಕಾಂಗ್ರೆಸ್‌ನ 22 ಶಾಸಕರ ರಾಜೀನಾಮೆಗೆ ಕಾರಣರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಹೊಸದಿಲ್ಲಿಯಿಂದ ಭೋಪಾಲಕ್ಕೆ ಆಗಮಿ ಸಲಿದ್ದಾರೆ. ಬೆಂಗಳೂರಿನಲ್ಲಿರುವ ಕೆಲವು ಶಾಸಕರು ಸೋಮವಾರ ತೆರಳಲಿದ್ದಾರೆ.
ಬಿಜೆಪಿಯಿಂದ ವಿಪ್ ಜಾರಿ: ಅಲ್ಪಮತಕ್ಕೆ ಕುಸಿದಿರುವ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಸೋಮವಾರ ವಿಶ್ವಾಸಮತ ಯಾಚಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲ ಶಾಸಕರಿಗೆ ;ಕಲಾಪದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ವಿಶ್ವಾಸ ಮತ ಯಾಚನೆ ವೇಳೆ ಸರಕಾರದ ವಿರುದ್ಧವಾಗಿ ಮತ ಚಲಾಯಿಸಬೇಕು’ ಎಂದು ಬಿಜೆಪಿ ವಿಪ್ ಜಾರಿಗೊಳಿಸಿದೆ.
ಕಾಂಗ್ರೆಸ್ ಸರಕಾರಕ್ಕೆ ಬಹುಮತವೇ ಇಲ್ಲ. ರಾಜ್ಯಪಾಲರು ಹೇಳಿರುವ ಪ್ರಕಾರ ಕಮಲ್‌ನಾಥ್ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಈ ಅಂಶವನ್ನು ರಾಜ್ಯಪಾಲರು ಸಿಎಂಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
– ನರೋತ್ತಮ್ ಮಿಶ್ರಾ, ಬಿಜೆಪಿ ಮುಖ್ಯ ಸಚೇತಕ