ಭೋಪಾಲ್; ಸರ್ಕಾರಿ ಜಮೀನು ವಿವಾದ ಪ್ರಕರಣದಲ್ಲಿ ಬುಡಕಟ್ಟು ಮಹಿಳೆಯೊಬ್ಬಳಿಗೆ ಬೆಂಕಿ ಹಚ್ಚಿ, ವಿಡಿಯೋ ಮಾಡಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಏಕನಾಥ ಶಿಂಧೆ ಸರ್ಕಾರ ಮುಂದಿನ ಆರು ತಿಂಗಳಲ್ಲಿ ಪತನ, ಮಧ್ಯಂತರ ಚುನಾವಣೆಗೆ ಸಿದ್ಧರಾಗಿ: ಪವಾರ್
38 ವರ್ಷದ ಮಹಿಳೆ ತನ್ನ ಸರ್ಕಾರಿ ಜಮೀನಿನಲ್ಲಿದ್ದ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳು ಆಕೆಗೆ ಬೆಂಕಿ ಹಚ್ಚಿ ವಿಡಿಯೋ ಮಾಡಿದ್ದು, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವುದಾಗಿ ಸಂತ್ರಸ್ತ ಮಹಿಳೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಬುಡಕಟ್ಟು ಮಹಿಳೆಯನ್ನು ರಾಂಪ್ಯಾರಿ ಶಹಾರಿಯಾ(38ವರ್ಷ) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಹಾರಿಯಾ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.
ಕೆಲವು ವರ್ಷಗಳ ಹಿಂದೆ ಸರ್ಕಾರದ ಯೋಜನೆಯಡಿ ಶಹಾರಿಯಾ ಕುಟುಂಬಕ್ಕೆ ಈ ಜಾಗ ಮಂಜೂರಾಗಿತ್ತು. ಕಳೆದ ಶನಿವಾರ ರಾಂಪ್ಯಾರಿ ತಮ್ಮ ಜಾಗಕ್ಕೆ ಹೋದಾಗ ಮೂವರು (ಪ್ರತಾಪ್, ಹನುಮಂತ್ ಮತ್ತು ಶ್ಯಾಮ್ ಕಿರಾರ್) ಈಕೆಯನ್ನು ಅಡ್ಡಗಟ್ಟಿದ್ದರು. ನಂತರ ಆಕೆಗೆ ಬೆಂಕಿಹಚ್ಚಿ ಪರಾರಿಯಾಗಿದ್ದರು.
ಕೆಲ ಸಮಯದ ನಂತರ ಸ್ಥಳಕ್ಕೆ ಬಂದ ಪತಿ ಅರ್ಜುನ್ ಸುಟ್ಟ ಗಾಯಗಳಿಂದ ಬಿದ್ದು ಒದ್ದಾಡುತ್ತಿದ್ದ ಪತ್ನಿಯನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ಪಂಕಜ್ ಶ್ರೀವಾಸ್ತವ್ ತಿಳಿಸಿದ್ದಾರೆ.