ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ, ಬಯಲು ಬಹಿರ್ದೆಸೆ ಮಾಡಿದರೆಂಬ ಕಾರಣಕ್ಕಾಗಿ ಇಬ್ಬರು ಮಕ್ಕಳನ್ನು ಕ್ರೂರವಾಗಿ ಹೊಡೆದು ಸಾಯಿಸಲಾದ ವಿದ್ರಾವಕ ಘಟನೆ ನಡೆದಿದೆ. ಈ ಹತ್ಯೆಯ ಹಿಂದೆ ಜಾತಿ ದ್ವೇಷವಿದೆ ಎಂದು ಕೆಲವು ವರದಿಗಳು ಹೇಳುತ್ತವಾದರೂ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ದೇಶದಲ್ಲಿನ ಕಾನೂನು ಸುವ್ಯವಸ್ಥೆಯ ದೌರ್ಬಲ್ಯದ ಜತೆಜತೆಗೇ ಅನೇಕ ಪ್ರಶ್ನೆಗಳನ್ನು ಎದುರಿಡುತ್ತಿದೆ. 21ನೇ ಶತಮಾನದಲ್ಲೂ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದರೆ, ನಮ್ಮ ದೇಶದ ಒಂದು ವರ್ಗ ಇನ್ನೂ ಎಷ್ಟೊಂದು ಹಿಂದೆ ಉಳಿದು ಬಿಟ್ಟಿದೆ ಎನ್ನುವುದು ಅರ್ಥವಾಗುತ್ತದೆ. ಇದರಲ್ಲಿ ಕಟಕಟೆಯಲ್ಲಿ ನಿಲ್ಲಬೇಕಾದವರು ಒಬ್ಬಿಬ್ಬರಲ್ಲ. ಇನ್ನು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಕೇಂದ್ರ ಸರ್ಕಾರ ಎಷ್ಟೇ ಶೌಚಾಲಯಗಳನ್ನು ನಿರ್ಮಿಸಿದರೂ ಇಂದಿಗೂ ದೇಶವು ಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತವಾಗಲು ಸಮಯ ಹಿಡಿಯಲಿದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತಿದೆ.
ಅಕ್ಟೋಬರ್ 2 ಕ್ಕೆ (ಅಂದರೆ ಸ್ವಚ್ಛ ಭಾರತ ಘೋಷಣೆಯಾದ ದಿನ) ಕೆಲವೇ ದಿನಗಳು ಇರುವಾಗಲೇ ಇಂಥ ಘಟನೆ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ಈ ಘಟನೆಗೆ ಅನ್ಯ ಆಯಾಮವೂ ಇರಬಹುದೆಂಬ ಸಂದೇಹವಿದೆ. ಸಂತ್ರಸ್ತ ಕುಟುಂಬವು ತಮಗೆ ಶೌಚಾಲಯ ನಿರ್ಮಿಸಲು ಪಂಚಾಯಿತಿಯಿಂದ ಹಣವೂ ಬಂದಿತ್ತು ಆದರೆ ಶೌಚಾಲಯ ನಿರ್ಮಿಸಲು ಕೆಲವರು ಬಿಡಲಿಲ್ಲ(ಆರೋಪಿಗಳನ್ನೊಳಗೊಂಡು) ಎನ್ನುತ್ತಿದ್ದಾರೆ. ಆ ಮಕ್ಕಳು ಬಯಲು ಬಹಿರ್ದೆಸೆಗೆ ಹೋಗುವುದನ್ನು ಸಹಿಸದವರು, ಆ ಮಕ್ಕಳ ಕುಟುಂಬಕ್ಕೆ ಶೌಚಾಲಯ ಕಟ್ಟಿಸಿಕೊಳ್ಳುವುದಕ್ಕೂ ಬಿಡದೇ ಇದ್ದದ್ದೇಕೆ? ಪೀಡಿತ ಪರಿವಾರವು ದಲಿತರು ಎಂಬ ಕಾರಣಕ್ಕಾಗಿಯೇ? ಇದೇ ಕಾರಣವಾದರೆ, ಭಾರತವು ಅಸ್ಪೃಶ್ಯತೆಯ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲೇಬೇಕಿದೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷವಾದರೂ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದರೆ, ದೇಶದ ಒಂದು ವರ್ಗ ಇನ್ನೂ ಸ್ವಾತಂತ್ರ್ಯ ಪಡೆದೇ ಇಲ್ಲ ಎಂದರ್ಥ. ರಾಷ್ಟ್ರ ಪಿತ ಗಾಂಧೀಜಿಯವರ ಕನಸಿನ ಭಾರತವು ಬರೀ ಕಸ ಮುಕ್ತವಲ್ಲ, ಅದು ಅಸ್ಪೃಶ್ಯತೆಯಿಂದಲೂ ಮುಕ್ತವಾಗಿರುವಂಥದ್ದು. ಆದರೆ ಇಂದಿಗೂ ಬಾಪೂಜಿಯ ಕನಸಿನ ಭಾರತವು ಕನಸಾಗಿಯೇ ಉಳಿದಿದೆ.
ಇನ್ನು, ಸ್ವಚ್ಛ ಭಾರತದ ವಿಷಯಕ್ಕೆ ಬಂದರೆ, ನಿಸ್ಸಂಶಯವಾಗಿಯೂ ಇದು ಇಡೀ ದೇಶಕ್ಕೆ ಹೊಸ ರೂಪ ಕೊಡುತ್ತಿರುವ ಕಾರ್ಯಕ್ರಮವೇ ಸರಿ. ಕಳೆದ ಕೆಲವು ವರ್ಷಗಳಲ್ಲಿ ಈ ಯೋಜನೆಯಡಿಯಲ್ಲಿ ಹಲವಾರು ಶ್ಲಾಘನೀಯ ಕಾರ್ಯಗಳು ನಡೆದಿವೆ. ಆದರೂ ಇಂದು ಅನೇಕ ಪರಿವಾರಗಳು ನಾನಾ ಕಾರಣಕ್ಕಾಗಿ (ಮೇಲಿನ ಘಟನೆಯಲ್ಲಾದಂತೆ) ಶೌಚಾಲಯಗಳಿಂದ ವಂಚಿತವಾಗಿಯೇ ಇವೆ. ಹೀಗಾಗಿ, ಶೌಚಾಲಯ ನಿರ್ಮಾಣದ ಯೋಜನೆಯು ಕೇವಲ ಬಯಲು ಬಹಿರ್ದೆಸೆಯ ಅಪಾಯಗಳ ಬಗ್ಗೆಯಷ್ಟೇ
ಅಲ್ಲದೇ, ಅಸ್ಪೃಶ್ಯತೆಯಂಥ ವಿಷಯದಲ್ಲೂ ಜಾಗೃತಿ ಮೂಡಿಸಬೇಕಾದ, ಆ ಆಯಾಮದಲ್ಲೂ ಮಾತನಾಡಬೇಕಾದ ಅಗತ್ಯವಿದೆ. ಈ ಕೆಲಸ ಕೇವಲ
ಒಬ್ಬರಿಂದ ಸಾಧ್ಯವಿಲ್ಲ, ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳೂ, ಸಮಾಜ ಸೇವಾ ಸಂಸ್ಥೆಗಳು, ಧಾರ್ಮಿಕ ಮುಖಂಡರ ಸಹ ಭಾಗಿತ್ವ ಅತ್ಯಗತ್ಯ.