ಹೊಸದಿಲ್ಲಿ/ಭೋಪಾಲ್: ‘ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪ್ರತಿ ಗ್ರಾಮದಲ್ಲಿ ಗೋ ಶಾಲೆ ನಿರ್ಮಿಸುತ್ತೇವೆ.’ ಹೀಗೆಂದು ಪಕ್ಷದ ಹಿರಿಯ ನಾಯಕ ಕಮಲ್‌ನಾಥ್ ಹೇಳಿದ್ದಾರೆ. ವಿದಿಶಾದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಮಾತುಗಳನ್ನಾಡಿದ್ದಾರೆ. ‘ಬಿಜೆಪಿ ಗೋಮಾತೆಯ ಹೆಸರು ಹೇಳಿಕೊಂಡು ಕೇವಲ ರಾಜಕೀಯ ಮಾಡುತ್ತಿದೆಯೇ ಹೊರತು ಸಾವಿರಾರು ಗೋವುಗಳು ಅಸುನೀಗುತ್ತಿದ್ದರೂ ಅದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಗೋ ಮಾತೆಯ ಕಷ್ಟ ಸಹಿಸಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
ಜಾನುವಾರು ರಕ್ಷಣೆಯ ನೆಪದಲ್ಲಿ ಕೆಲ ಗುಂಪುಗಳು ಕಿಡಿಗೇಡಿತನ ನಡೆಸಿದ ಘಟನೆಗಳು ನಡೆದಾಗ ಬಿಜೆಪಿ ವಿರುದ್ಧ ಕಟುಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಈಗ ಗೋರಕ್ಷಣೆ ಮಾತುಗಳನ್ನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ‘ಇಂಥ ನಾಟಕ ಮಾಡಿ ತನ್ನದೇ ಆಗಿರುವ ವೋಟ್ ಬ್ಯಾಂಕ್ ಅನ್ನೂ ಕಾಂಗ್ರೆಸ್ ಕಳೆದುಕೊಳ್ಳಲಿದೆ’ ಎಂದಿದ್ದಾರೆ.
ಆಯ್ಕೆ ವಿಧಾನ ಬದಲು?: ಇದೇ ವೇಳೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸದಸ್ಯರು ಆಯಾ ವಿಧಾನಸಭಾ ಕ್ಷೇತ್ರಕ್ಕೆ ಹೋಗಿ ವಾಸ್ತವಿಕ ವಿಚಾರಗಳನ್ನು ಪರಿಗಣಿಸಿಯೇ ಅರ್ಹರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ. ಇದುವರೆಗೆ ಆಯಾ ಪ್ರದೇಶ ಕಾಂಗ್ರೆಸ್‌ನ ಸ್ಥಳೀಯ ಸಮಿತಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಮಾಲೋಚನೆ ನಡೆಸಿ 3-5 ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡುತ್ತಿತ್ತು. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಜಿಲ್ಲೆ, ರಾಜ್ಯ ಘಟಕಗಳಿಂದ ಮಾಹಿತಿ ಪಡೆದುಕೊಂಡಿದ್ದರೂ, ಪರಿಶೀಲನಾ ಸಮಿತಿ ಮೂರು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ತನ್ನದೇ ಆದ ಅಭಿಪ್ರಾಯ ಸಂಗ್ರಹಿಸಲಿದೆ.