ಜಬಾಲ್ಪುರ್(ಮಧ್ಯಪ್ರದೇಶ): ಕೇವಲ 20 ರೂಪಾಯಿಗೆ ಔಷಧಗಳನ್ನು ನೀಡಿ, ಜನಪ್ರಿಯರಾಗಿದ್ದ ಮಧ್ಯಪ್ರದೇಶದ ಜಬಾಲ್ಪುರ್ ಜಿಲ್ಲೆಯ ವೈದ್ಯ ಡಾ.ಎಂ.ಸಿ.ದಾವರ್(77ವರ್ಷ) ಅವರಿಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ – ಹರಿಪ್ರಿಯಾ; ಶಿವಣ್ಣ, ಡಾಲಿ ಸೇರಿ ಅನೇಕ ಗಣ್ಯರು ಭಾಗಿ
2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿತ್ತು. ಒಟ್ಟು 106 ಜನರಿಗೆ ಪ್ರಶಸ್ತಿ ಪ್ರಕಟಿಸಲಾಗಿದ್ದು, ಈ ಪೈಕಿ 6 ಜನರಿಗೆ ಪದ್ಮವಿಭೂಷಣ, 9 ಜನರಿಗೆ ಪದ್ಮಭೂಷಣ ಹಾಗೂ 91 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಈ ಪಟ್ಟಿಯಲ್ಲಿ ಮಧ್ಯಪ್ರದೇಶದ ಜನಪ್ರಿಯ ವೈದ್ಯ ಎಂಸಿ ದಾವರ್ ಅವರ ಹೆಸರು ಪ್ರಕಟವಾಗಿದೆ. ಡಾ.ದಾವರ್ ಅವರು 1946ರ ಜನವರಿ 16ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ದೇಶ ವಿಭಜನೆಯ ನಂತರ ದಾವರ್ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಿತ್ತು. 1967ರಲ್ಲಿ ಜಬಾಲ್ಪುರ್ ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು.
ದಾವರ್ ಅವರು 1971ರಲ್ಲಿ ಭಾರತ ಮತ್ತು ಪಾಕ್ ನಡುವೆ ನಡೆದ ಯುದ್ಧ ಸಂದರ್ಭದಲ್ಲಿಯೂ ಭಾರತೀಯ ಸೇನೆಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1972ರಿಂದ ದಾವರ್ ಅವರು ಜಬಾಲ್ಪುರ್ ಪ್ರದೇಶದಲ್ಲಿ ಜನರಿಗೆ ಅತೀ ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ ನೀಡಲು ಆರಂಭಿಸಿದ್ದರು.
ಆರಂಭದ ದಿನಗಳಲ್ಲಿ ವೈದ್ಯ ದಾವರ್ ಅವರ ಬಳಿ ಬರುತ್ತಿದ್ದ ರೋಗಿಗಳ ಬಳಿ ಇವರು ಪಡೆಯುತ್ತಿದ್ದ ಶುಲ್ಕ ಕೇವಲ ಎರಡು ರೂಪಾಯಿ, ಪ್ರಸ್ತುತ ಅವರು 20 ರೂಪಾಯಿ ಶುಲ್ಕ ಪಡೆಯುತ್ತಿದ್ದಾರೆ.
“ಕಠಿಣ ಪರಿಶ್ರಮ ಕೆಲವೊಮ್ಮೆ ವಿಳಂಬವಾದರೂ ಸಹ ತಕ್ಕ ಪ್ರತಿಫಲ ನೀಡುತ್ತದೆ. ಅದರ ಪರಿಣಾಮ ಜನರ ಆಶೀರ್ವಾದದಿಂದ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ” ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ದಾವರ್ ಅವರು ಎಎನ್ ಐ ಜೊತೆ ಮಾತನಾಡುತ್ತ ತಮ್ಮ ಮುಕ್ತ ಅಭಿಪ್ರಾಯವನ್ನು ಹಮಚಿಕೊಂಡಿದ್ದಾರೆ.