ಮಧ್ಯಪ್ರದೇಶ : ಮಧ್ಯಪ್ರದೇಶ ಸರ್ಕಾರ ಭಾನುವಾರ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಗಿಡಗಳನ್ನು ನೆಡುವ ಮೂಲಕ ಹೊಸ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದೆ.
ರಾಜ್ಯದ ಇಂದೋರ್ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು, ಇದಾದ ಬಳಿಕ ರಾಜ್ಯದ ಮುಖ್ಯಮಂತ್ರಿ ಮೋಹನ್ ಯಾದವ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ತಂಡದಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಹಾಕಿದ ಯಾದವ್, ಈಗಾಗಲೇ ಭಾರತದ ಸ್ವಚ್ಛ ನಗರ ಮತ್ತು ಮಧ್ಯಪ್ರದೇಶದ ಆರ್ಥಿಕ ರಾಜಧಾನಿಯಾಗಿರುವ ಇಂದೋರ್ ಈಗ ಒಂದೇ ದಿನದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಿದರು. ಸ್ವಚ್ಛತೆಯ ಜೊತೆಗೆ ಅತಿ ಹೆಚ್ಚು ಗಿಡಗಳನ್ನು ನೆಟ್ಟು ಇತಿಹಾಸ ನಿರ್ಮಿಸಿದ ಇಂದೋರ್ ಜನತೆಗೆ ನನ್ನ ಅಭಿನಂದನೆಗಳು ಇದರೊಂದಿಗೆ ಇಂದೋರ್ ಈಗ ವಿಶ್ವದ ನಂಬರ್ 1 ರಾಜ್ಯವಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ “ಏಕ್ ಪೆಡ್ ಮಾ ಕೆ ನಾಮ್” ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ಈ ಅಭಿಯಾನದ ಅಡಿಯಲ್ಲಿ, ದೇಶದಾದ್ಯಂತ ಸರಿಸುಮಾರು 140 ಕೋಟಿ ಗಿಡಗಳನ್ನು ನೆಡುವ ಉದ್ದೇಶ ಹೊಂದಿದ್ದು, ಅದರಂತೆ ಮಧ್ಯಪ್ರದೇಶದಲ್ಲಿ 5.5 ಕೋಟಿ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ, ಸ್ವಚ್ಛ ಸರ್ವೇಕ್ಷಣೆಯ ಪ್ರಕಾರ ಹಲವಾರು ವರ್ಷಗಳಿಂದ ದೇಶದ ಸ್ವಚ್ಛ ನಗರ ಎಂದು ಗುರುತಿಸಿಕೊಂಡಿರುವ ಇಂದೋರ್ ಈ ಅಭಿಯಾನದಲ್ಲಿ 51 ಲಕ್ಷ ಸಸಿಗಳನ್ನು ನೆಡುವಉದ್ದೇಶ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Udupi: ಬಾರ್ ಮಾಲಕರ ಮನೆಯಲ್ಲಿ ಅಗ್ನಿ ಅವಘಡ; ದಂಪತಿಗೆ ಗಂಭೀರ ಗಾಯ