Advertisement

ಹಣ್ಣುಗಳ ರಾಜನ ಲೋಕದ ಕದ ತೆರೆದ ಮಧುರಂ-2019.

12:02 PM May 10, 2019 | keerthan |

ಬದಿಯಡ್ಕ: ಮೇ ತಿಂಗಳು ಹೂಹಣ್ಣುಗಳ ಮಾಸ. ಮೈತುಂಬ ರಂಗುರಂಗಿನ ಹೂಗಳಿಂದ ಕಂಗೊಳಿಸುವ ಗಿಡಮರಗಳು, ಹಸಿರು ಹಳದಿ ಹಣ್ಣುಗಳು ಜನರನ್ನು ಪ್ರಕೃತಿಯತ್ತ ಸೆಳೆಯುತ್ತದೆ. ಹಲಸು, ಪೇರಳೆ, ಈರೋಳು ಮುಂತಾದ ಹಣ್ಣುಗಳ ನಡುವೆ ತನ್ನ ವಿಶಿಷ್ಟವಾದ ರುಚಿ ಹಾಗೂ ಬಣ್ಣದಿಂದ ಕಂಗೊಳಿಸುವ ಹಣ್ಣೆಂದರೆ ಮಾವಿನಹಣ್ಣು ಮಾತ್ರ. ಹಣ್ಣುಗಳ ರಾಜ ಎಂಬ ಕೀರ್ತಿಗಳಿಸಿರುವ ಮಾವು ನಮ್ಮ ದೇಶದ ರಾಷ್ಟ್ರೀಯ ಹಣ್ಣು ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

Advertisement

ಮಧುರಂ-2019.
ಪಡನ್ನಕ್ಕಾಡ್‌ ಕೃಷಿ ಕಾಲೇಜು ವೈವಿಧ್ಯಮಯ ಮಾವಿನ ಹಣ್ಣುಗಳ ಮಹೋತ್ಸವ ಮೂಲಕ ಹಣ್ಣುಗಳ ರಾಜನ ಲೋಕಕ್ಕೆ ಕದತೆರೆದು ನಾಡಿನ ಗಮನ ಸೆಳೆಯಿತು. ಮಲಬಾರ್‌ ಮ್ಯಾಂಗೋ ಫೆಸ್ಟ್‌ ಮಧುರಂ-2019 ಎಂಬ ಹೆಸರಿನಲ್ಲಿ ನಡೆಯುತ್ತಿರುವ ಮಾವಿನಹಣ್ಣುಗಳ ಮಹೋತ್ಸವದಲ್ಲಿ ಸ್ಥಳೀಯ ಮತ್ತು ವಿವಿಧ ಕಡೆಗಳ ವೈವಿಧ್ಯಮಯ ಮಾವಿನಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆದಿದೆ. ಕೃಷಿ ಕಾಲೇಜಿನ ಉತ್ಪನ್ನವಾಗಿರುವ ಫಿರಂಗಿ ಲಡುವದಿಂದ ತೊಡಗಿ ಅತ್ಯಧಿಕ ಬೆಲೆ ಹೊಂದಿರುವ ಅಲೋನ್ಸಾ, ಸಿಂಧೂರಂ, ನೀಲಂ, ಮುಂಡಪ್ಪ, ಮೆರ್ಕ್ನೂರಿ, ಸುವರ್ಣ ರೇಖೆ, ಕರ್ಪೂರ, ಬಂಗೋರ ಸಹಿತ 20ಕ್ಕೂ ಅಧಿಕ ಮಾವಿನಹಣ್ಣುಗಳು ಇಲ್ಲಿ ಹಣ್ಣು ಪ್ರಿಯರನ್ನು ಸೆಳೆಯುತ್ತಿವೆ. ಕಾಲೇಜು ವಿದ್ಯಾರ್ಥಿ ಯೂನಿಯನ್‌ ನೇತೃತ್ವದಲ್ಲಿ ಇಲ್ಲಿ ಮಾವಿನ ಹಣ್ಣುಗಳ ಮಹೋತ್ಸವ ನಡೆಯುತ್ತಿದೆ.

2004 ರಿಂದ ಯೂನಿಯನ್‌ ನೇತೃತ್ವದಲ್ಲಿ ಮ್ಯಾಂಗೋ ಫೆಸ್ಟ್‌ ಪ್ರಾರಂಭವಾಗಿದ್ದು ಆರಂಭದ ಹಂತದಲ್ಲಿ ಕಾಲೇಜು ಆವರಣದಲ್ಲಿ ನೆಟ್ಟು ಬೆಳೆಸಿದ ಮಾವಿನ ಹಣ್ಣುಗಳ ಪ್ರದರ್ಶನ ಮಾತ್ರ ನಡೆಯುತ್ತಿತ್ತು. ನಂತರದ ವರ್ಷಗಳಲ್ಲಿ ಮಾವುಪ್ರಿಯರ ಬೇಡಿಕೆಯ ಹಿನ್ನೆಲೆಯಲ್ಲಿ ಕಣ್ಣೂರು ಸಹಿತ ಇತರ ಜಿಲ್ಲೆಗಳಿಂದ ವೈವಿಧ್ಯಮಯ ಮಾವಿನ ಹಣ್ಣುಗಳು ಇಲ್ಲಿಗೆ ರವಾನೆಗೊಳ್ಳುತ್ತಿವೆ.

ಕಳೆದ ವರ್ಷ ನಡೆದಿದ್ದ ಮ್ಯಾಂಗೋ ಫೆಸ್ಟ್‌ನಲ್ಲಿ 7 ಟನ್‌ ಮಾವಿನ ಹಣ್ಣುಗಳ ಮಾರಾಟ ನಡೆದಿದೆ.  ಕಾಲೇಜು ಆವರಣದಲ್ಲೇ ಸರಿಸುಮಾರು 150 ಕ್ಕೂ ಅಧಿಕ ಮಾವಿನ ಮರಗಳಿದ್ದು, 20 ಜಾತಿಯ ಮಾವಿನಹಣ್ಣುಗಳನ್ನು ಬೆಳೆಸಲಾಗುತ್ತಿದೆ. ಕಿಲೋಗೆ 60 ರೂ.ನಿಂದ 130 ರೂ. ಬೆಲೆಯಿರುವ ಅತ್ಯಧಿಕ ದೊಡ್ಡ ಗಾತ್ರದ ಗುದಾದ್‌ ಮಾವಿನ ಹಣ್ಣು ಇಲ್ಲಿ ಗಮನಾರ್ಹವಾಗಿದೆ. ಒಂದು ಹಣ್ಣು 600 ಗ್ರಾಂನಿಂದ 800 ಗ್ರಾಂ ತೂಕವಿರುತ್ತದೆ.


ಕಾಲೇಜಿನ ನೇತೃತ್ವದಲ್ಲಿ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ
ಕಾಲೇಜಿನ ಇತರ ವಿಭಾಗಗಳ ನೇತೃತ್ವದಲ್ಲಿ ವಿವಿಧ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇಲ್ಲಿದೆ. ಬೇರೆ ಬೇರೆ ಹಣ್ಣುಗಳು, ಪುರಾತನ ಕೃಷಿ ಉಪಕರಣಗಳು, ಸಾಕು ಹಕ್ಕಿಗಳು, ಮೀನುಗಳು, ನರ್ಸರಿ ಸಸ್ಯಗಳು ಇತ್ಯಾದಿ ಗಮನ ಸೆಳೆದಿವೆ. ಪ್ರದರ್ಶನದ ಅಂಗವಾಗಿ ವಿಚಾರ ಸಂಕಿರಣ, ಸ್ಥಳೀಯ ಮಾವಿನ ಹಣ್ಣುಗಳ ಕುರಿತಾಗಿ ಸ್ಪರ್ಧೆಗಳು ಮೊದಲಾದುವು ನಡೆಯುತ್ತಿದೆ. ಪ್ರತಿದಿನ ನೂರಾರು ಮಂದಿ ಕೃಷಿ ಪ್ರೇಮಿಗಳು ಈ ಪ್ರದರ್ಶನ ವೀಕ್ಷಿಸಲು ಆಗಮಿಸುತ್ತಿದ್ದು ಫಿರಂಗಿ ಲಡುವ, ಸಿಂಧೂರಂ, ಮುಂಡಪ್ಪ ಜಾತಿಯ ಮಾವಿನಹಣ್ಣಗಳಿಗೆ ಇಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬುದಾಗಿ ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.

Advertisement

ಕೃಷಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೃಷಿ ಕಾಲೇಜು ತೋರುವ ಆಸಕ್ತಿ ಹಾಗೂ ವಿದ್ಯಾರ್ಥಿಗಳನ್ನು ಕೃಷಿಯತ್ತ ಸೆಳೆಯಲು ಕೈಗೊಳ್ಳುವ ಇಂತಹ ಅನುಕರಣೀಯ ಮಾದರಿ ಕಾರ್ಯಗಳು ಎಲ್ಲೆಡೆ ನಡೆಯಬೇಕು. ಹಲಸು, ಮಾವು ಮಾತ್ರವಲ್ಲದೆ ಇತರ ಹಣ್ಣುಗಳನ್ನೂ ಉಪಯೋಗಿಸಿ ಆಹಾರ ಮೇಳ, ಮಾರಾಟ ಮೇಳ. ಪ್ರದರ್ಶನದ ಮೂಲಕ ಹಣ್ಣುಗಳು ಹಾಗೂ ಇತರ ಕೃಷಿ ಉತ್ಪನ್ನಗಳ ಉಪಯೋಗದ ಬಗ್ಗೆ ಸರಿಯಾದ ಮಾಹಿತಿ ನೀಡುವ ಕಾರ್ಯ ದೇಶದೆಲ್ಲೆಡೆ ನಡೆಯುತ್ತಿದ್ದರೆ ಸಹಜವಾಗಿಯೇ ನಮ್ಮ ದೇಶದಲ್ಲಿ ಮತ್ತೆ ಕೃಷಿ ಅರ್ಥಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ.

ಅಖೀಲೇಶ್‌ ನಗುಮುಗಂ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next