ಬೆಂಗಳೂರು: ಮೂರು ವರ್ಷಗಳ ಹಿಂದೆ ನಗರದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಅದೇ ಬ್ಯಾಂಕಿನ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿ ಮಧುಕರ್ ರೆಡ್ಡಿ ಗುರುತು ಪತ್ತೆ ಕಾರ್ಯ (ಐಡೆಂಟಿಫಿಕೇಷನ್ ಪರೇಡ್) ಶುಕ್ರವಾರ ನಡೆದಿದೆ.
ಬೆಂಗಳೂರು ದಕ್ಷಿಣ ತಹಸೀಲ್ದಾರ್ (ಮ್ಯಾಜಿಸ್ಟ್ರೇಟ್) ಎದುರು ಪರೇಡ್ ನಡೆದಿದ್ದು, ಆರೋಪಿ ಮಧುಕರ್ ರೆಡ್ಡಿಯನ್ನು ಹಲ್ಲೆಗೊಳಗಾದ ಜ್ಯೋತಿ ಉದಯ್ ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುತು ಪತ್ತೆ ಕಾರ್ಯ ವೇಳೆ ಮಧುಕರ್ ರೆಡ್ಡಿ ಜತೆ ನಾಲ್ಕೈದು ಮಂದಿ ಇತರೆ ಆರೋಪಿಗಳನ್ನು ನಿಲ್ಲಿಸಲಾಗಿತ್ತು.
ಈ ವೇಳೆ ಎಟಿಎಂ ಕೇಂದ್ರದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಗುರುತಿಸುವಾಗ ಜ್ಯೋತಿ ಉದಯ್ ಅವರು ಗೊಂದಲಕ್ಕೀಡದರು. ಬಳಿಕ ಆರೋಪಿಯನ್ನು ಗುರುತಿಸಿದ್ದಾರೆ. ಅನಂತರ ಆರೋಪಿಗಳ ಸ್ಥಳ ಬದಲಿಸಿ ನಿಲ್ಲಿಸಿ ಮತ್ತೂಮ್ಮೆ ಐಡೆಂಟಿಫಿಕೇಷನ್ ಪರೇಡ್ ನಡೆಸಿದಾಗಲೂ ಕರಾರುವಕ್ಕಾಗಿ ಪತ್ತೆ ಹಚ್ಚಿದ್ದಾರೆ.
ಕಳೆದ ತಿಂಗಳು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಪತ್ತೆಯಾದ ಆರೋಪಿ ಮಧುಕರ್ ರೆಡ್ಡಿ ವಿಚಾರಣೆ ವೇಳೆ ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ನಡೆಸಿದ ಹಲ್ಲೆ ಬಗ್ಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಬಾಡಿವಾರೆಂಟ್ ಮೂಲಕ ಆರೋಪಿಯನ್ನು ನಗರಕ್ಕೆ ಕರೆತಂದಿದ್ದರು.
ಅಲ್ಲದೇ ಹಲ್ಲೆ ನಡೆದ ಸ್ಥಳಕ್ಕೆ ಕರೆದೊಯ್ದು ಮೂರು ಬಾರಿ ಮರು ಮಹಜರು ಮಾಡಿದ್ದರು. ನಂತರ ಐಡೆಂಟಿಫಿಕೇಷನ್ ಪರೇಡ್‌ಗೆ ಹಾಜರಾಗುವಂತೆ ಜ್ಯೋತಿ ಉದಯ್ ಅವರಿಗೆ ಸ್ಥಳೀಯ ತಹಶೀಲ್ದಾರ್ ಅವರಿಂದ ನೋಟಿಸ್ ಸಹ ನೀಡಲಾಗಿತ್ತು.