Advertisement

ಗೋಡೆಗಳಲ್ಲಿ ಮಧುಬನಿ ಚಿತ್ರಗಳ ಮೆರುಗು

11:19 AM Apr 11, 2022 | Team Udayavani |

ಬಂಟ್ವಾಳ: ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮೂಲಸೌಕರ್ಯ ಸೇರಿದಂತೆ ಗುಣಮಟ್ಟದ ಶಿಕ್ಷಣದಲ್ಲಿ ಮಿಂಚಿರುವ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯ ಗೋಡೆಗಳು ಇದೀಗ ಬಣ್ಣ ಬಣ್ಣದ ಚಿತ್ತಾರಗಳಿಂದ ಮಿಂಚುತ್ತಿದ್ದು, ಚಿತ್ರಕಲಾ ಶಿಕ್ಷಕರ ಕೈಚಳಕದಿಂದ ಮಧುಬನಿ ಚಿತ್ರಗಳ ಮೆರುಗು ಗೋಡೆಗಳಲ್ಲಿವೆ.

Advertisement

ಒಂದು ಕಾಲದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪಿದ್ದ ಸರಕಾರಿ ಶಾಲೆಯು ದಡ್ಡಲಕಾಡು ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ನಿಂದ ದತ್ತು ಪಡೆಯಲ್ಪಟ್ಟು, ನಿರಂತರವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಹಂತ ಹಂತವಾಗಿ ಅಭಿವೃದ್ಧಿ ಕಂಡ ಶಾಲೆಯಂತೆಯೇ ಮುಂದೆ ಶಾಲೆಯ ಗೋಡೆಗಳು ಕೂಡ ಚಿತ್ತಾರಗಳಿಂದ ಆಕರ್ಷಣೆಯ ಕೇಂದ್ರಗಳಾಗಲಿವೆ.

ಶಾಲೆಯ ಕೆಳ ಅಂತಸ್ತಿನ ಗೋಡೆಗಳಲ್ಲಿ ಮಧುಬನಿ ಶೈಲಿಯ ಚಿತ್ರಗಳನ್ನು ಬಿಡಿಸಲಾಗಿದ್ದು, ಪ್ರಾಣಿ-ಪಕ್ಷಿ, ಚಿರತೆ ಮೊದ ಲಾದ ವರ್ಣರಂಜಿತ ಚಿತ್ರಗಳ ಜತೆಗೆ ಸಂಸ್ಕೃತಿ, ನಂಬಿಕೆ, ಆರಾಧನೆಯ ಚಿತ್ರಗಳು ಮಧುಬನಿಯ ಶೈಲಿಯ ಮೂಲಕ ಮೂಡಿಬಂದಿವೆ. ವಿವಿಧ ಬಗೆಯ ಸುಮಾರು 16 ಚಿತ್ರಗಳನ್ನು ರಚಿಸಲಾಗಿದ್ದು, ಮುಂದಿನ ಹಂತದಲ್ಲಿ ಇನ್ನಷ್ಟು ಚಿತ್ರಗಳು ಮೂಡಿಬರಲಿವೆ.

ತಾಲೂಕಿನ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರಾದ ಮುರಳೀಕೃಷ್ಣ ರಾವ್‌, ಬಾಲಕೃಷ್ಣ ಶೆಟ್ಟಿ, ಧನಂಜಯ ಪಿ., ಚೆನ್ನಕೇಶವ ಡಿ., ತಾರಾನಾಥ ಕೈರಂಗಳ, ಅಮೀನಾ ಶೇಖ್‌ ಅವರು ಕಳೆದ 10 ದಿನಗಳಿಂದ ಮಧುಬನಿ ಚಿತ್ರರಚನೆಯಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಚಿತ್ರ ರಚನೆಯ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಶಿಕ್ಷಕರ ಜತೆಗೆ ಶಾಲೆಯ ವಿದ್ಯಾರ್ಥಿಗಳಾದ ಗೌರವ್‌, ಶ್ರೀಜಲ್‌, ಭೂಮಿಕಾ, ಯತೀಕ್ಷ್ ಅವರು ಕೂಡ ಚಿತ್ರಕಲಾ ಶಿಕ್ಷಕರಿಗೆ ಸಹಕಾರ ನೀಡಿದ್ದಾರೆ. ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಅಂಚನ್‌ ಹಾಗೂ ಶಾಲಾ ಮುಖ್ಯಶಿಕ್ಷಕ ರಮಾನಂದ ಅವರ ಮುತುವರ್ಜಿಯಲ್ಲಿ ಮಧುಬನಿ ಶೈಲಿಯ ಚಿತ್ರಗಳು ಗೋಡೆಯನ್ನು ಅಲಂಕರಿಸಿವೆ.

Advertisement

ಚಿತ್ರಕಲೆಯ ಆಸಕ್ತಿ ಮೂಡಲು ಸಾಧ್ಯ

ಶಾಲೆಯ ಗೋಡೆಗಳಲ್ಲಿ ಮಧುಬನಿ ಶೈಲಿಯ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರು ರಚಿಸಿದ್ದು, ಆಕರ್ಷಕವಾಗಿ ಮೂಡಿಬಂದಿದೆ. ಶಾಲೆಯ ಕೆಲವು ವಿದ್ಯಾರ್ಥಿಗಳು ಕೂಡ ಚಿತ್ರಗಳಿಗೆ ಬಣ್ಣ ತುಂಬುವ ಕಾರ್ಯ ನಡೆಸಿದ್ದಾರೆ. ಇದು ಇತರ ವಿದ್ಯಾರ್ಥಿಗಳಲ್ಲಿಯೂ ಚಿತ್ರಕಲೆಯ ಕುರಿತು ಆಸಕ್ತಿ ಮೂಡಲು ಕಾರಣವಾಗಲಿದೆ. ಇಂತಹ ಚಿತ್ರಗಳಿಂದ ಶಾಲೆಯ ಆಕರ್ಷಣೆ ಇನ್ನೂ ಹೆಚ್ಚಾಗಲಿದೆ. ಪ್ರಕಾಶ್‌ ಅಂಚನ್‌, ಅಧ್ಯಕ್ಷರು, ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌, ದಡ್ಡಲಕಾಡು

Advertisement

Udayavani is now on Telegram. Click here to join our channel and stay updated with the latest news.

Next