Advertisement

ಬಗರ್‌ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿಗೆ ಒತ್ತಾಯಿಸಿ ಮಾಜಿ ಶಾಸಕ ಮಧು ಪ್ರತಿಭಟನೆ

03:55 PM Feb 21, 2022 | Team Udayavani |

ಸಾಗರ: ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಂಜೂರಾತಿಗೆ ಒತ್ತಾಯಿಸಿ ಏಪ್ರಿಲ್ ಮೊದಲ ವಾರದಲ್ಲಿ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದ್ದಾರೆ.

Advertisement

ತಾಲೂಕಿನ ಕುಗ್ವೆಯಲ್ಲಿ ಸೋಮವಾರ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾಗಿ, ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದ ಅವರು, ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಮತ್ತು ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರಿಗೆ ಭೂಮಿಹಕ್ಕು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಭೂಮಿಹಕ್ಕು ಪಡೆಯುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಚಳುವಳಿಯಾಗಿ ರೂಪುಗೊಳ್ಳಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸೊರಬ ತಾಲೂಕಿನಲ್ಲಿ ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಪ್ರತಿಭಟನೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಈ ಪ್ರತಿಭಟನೆ ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದೆ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅಧಿಕಾರ ಹಿಡಿಯುವ ಸಂದರ್ಭದಲ್ಲಿ ಜನರಿಗೆ ನೂರಾರು ಭರವಸೆ ನೀಡಿದ್ದ ಬಿಜೆಪಿ ಈಗ ಎಲ್ಲವನ್ನೂ ಮರೆತು ಜನವಿರೋಧಿ, ರೈತವಿರೋಧಿಯಾಗಿ ಕೆಲಸ ಮಾಡುತ್ತಿದೆ. ಜನಸಾಮಾನ್ಯರ ಕುಂದುಕೊರತೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಎಲ್ಲಾ ಧರ್ಮದ ವಿದ್ಯಾರ್ಥಿಗಳು ಶಾಲೆಯ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು: ಅಮಿತ್ ಶಾ

Advertisement

ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಅಗಳ ಹೊಡೆದು ಸರ್ಕಾರಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಜಾಸ್ತಿಯಾಗುತ್ತಿದೆ. ರೈತರು ಭೂಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರೂ ಅದನ್ನು ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರು ಬೀದಿಗೆ ಬರುವ ದಿನ ದೂರವಿಲ್ಲ. ಇದರ ಜೊತೆಗೆ ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ರೈತರು ಬೆಳೆ ಕಳೆದುಕೊಳ್ಳುವ ಸ್ಥಿತಿ ಇದೆ. ರೈತರು ಮತ್ತು ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕೆ ಹೋರಾಟವೊಂದೆ ಮಾರ್ಗವಾಗಿದೆ. ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶಿವಾನಂದ ಕುಗ್ವೆ, ಈಶ್ವರ ನಾಯ್ಕ್, ಕಾಂಗ್ರೇಸ್ ಪ್ರಮುಖರಾದ ಹುಚ್ಚಪ್ಪ ಮಂಡಗಳಲೆ, ಕೆ.ಹೊಳೆಯಪ್ಪ, ಲೋಕೇಶ್ ಗಾಳಿಪುರ, ಅಶೋಕ ಬರದವಳ್ಳಿ, ಎಚ್.ಎನ್.ದಿವಾಕರ್, ಗಣಪತಿ, ಬಸವರಾಜ್ ಸೈದೂರು, ಅಣ್ಣಪ್ಪ ಬರದವಳ್ಳಿ, ಮನೋಜ್ ಕುಗ್ವೆ, ಮಹಾಬಲೇಶ್ವರ ಕುಗ್ವೆ, ಸುಧಾಕರ ಕುಗ್ವೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next