Advertisement

ಶಿವಮೊಗ್ಗ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳದ ಜೆಡಿಎಸ್‌ ವರಿಷ್ಠರು

12:30 AM Mar 14, 2019 | Team Udayavani |

ಬೆಂಗಳೂರು: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪಕ್ಷದ ನಾಯಕರ ವರ್ತನೆಯಿಂದ ಬೇಸರಗೊಂಡಿದ್ದಾರೆ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು, ಮಧು ಬಂಗಾರಪ್ಪ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸಿ ಸ್ಪರ್ಧೆಗೆ ಒಪ್ಪಿಸಿದರಾದರೂ ಆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಯಾವುದೇ ನಾಯಕರು ಶಿವಮೊಗ್ಗ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಮಧು ಬಂಗಾರಪ್ಪ ಅವರಿಗೆ ಅಸಮಾಧಾನ ತರಿಸಿದೆ ಎಂದು ಹೇಳಲಾಗಿದೆ.

Advertisement

ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಹಳೇ ಮೈಸೂರು ಭಾಗದ ಕ್ಷೇತ್ರಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದ್ದಾರೆ. ಮಂಡ್ಯ, ಹಾಸನ, ತುಮಕೂರು, ಮೈಸೂರಿನಲ್ಲಿ ಜೆಡಿಎಸ್‌ ಶಾಸಕರು, ತಳಮಟ್ಟದ ಸಂಘಟನೆಯೂ ಬಲವಾಗಿದೆ. ಆದರೆ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ  ಹೋರಾಟ ಮಾಡಬೇಕು. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರು  ಬಿಟ್ಟರೆ ಬೇರೆಲ್ಲಾ ಬಿಜೆಪಿ ಶಾಸಕರೇ ಇದ್ದಾರೆ. ಅಲ್ಲಿ ಪಕ್ಷಸಂಘಟನೆ ಮಾಡಬೇಕು. ರಾಜ್ಯ ನಾಯಕರು ತಮಗೆ ಸಹಕಾರ ನೀಡುತ್ತಿಲ್ಲ ಎಂಬುದು ಅವರ ಅಳಲು ಎನ್ನಲಾಗಿದೆ. ಉಪ ಚುನಾವಣೆ ಸೋಲಿನ ನಂತರ ಕೆಲವು ನಾಯಕರ ವರ್ತನೆಯಿಂದ ಬೇಸರಗೊಂಡು ಮಧು ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು.

ರಾಜ್ಯದಲ್ಲಿ ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಇದ್ದರೂ ಪಕ್ಷ ಸಂಘಟನೆ ಮಾಡುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷ ಸಂಘಟನೆ ಮಾಡುವುದರಿಂದ ತಳಮಟ್ಟದಲ್ಲಿ ಕೆಲಸ ಮಾಡುವುದು ಕಷ್ಟ. ಸರ್ಕಾರ ನಮ್ಮದೇ ಇದ್ದರೂ ಪಕ್ಷಕ್ಕೆ ದುಡಿದವರನ್ನು ಪರಿಗಣಿಸಿಲ್ಲ ಎಂದು ನೇರವಾಗಿ ದೇವೇಗೌಡರಿಗೆ ತಿಳಿಸಿದ್ದರು. ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಗೌಡರು ಭರವಸೆ ನೀಡಿ ಮತ್ತೆ ಪಕ್ಷದಲ್ಲಿ ಸಕ್ರಿಯರಾಗುವಂತೆ ಮನವಿ ಮಾಡಿ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ, ಆ ನಂತರ ಶಿವಮೊಗ್ಗದತ್ತ ನಾಯಕರು ಯೋಚನೆ ಮಾಡುತ್ತಿಲ್ಲ. ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಇದಕ್ಕೆ ಯಾಕೆ ಸ್ಪರ್ಧೆಮಾಡಬೇಕು ಎಂಬುದು ಆ ಭಾಗದ ಜೆಡಿಎಸ್‌ ಮುಖಂಡರ ಅಸಮಾಧಾನ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next