ಹನೂರು: ಆಷಾಢ ಅಮಾವಾಸ್ಯೆ ಹಿನ್ನೆಲೆ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತ ಕುಲಕೋಟಿಯ ಆರಾಧ್ಯ ದೈವ ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ ಮತ್ತು ಅಮಾವಾಸ್ಯೆ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ನೆರವೇರಿದವು.
ಮಹದೇಶ್ವರನಿಗೆ ಬೇಡಗಂಪಣ ಅರ್ಚಕ ವೃಂದದವರಿಂದ ಎಳ್ಳು ಕುಟ್ಟಿದ ಎಣ್ಣೆ ಸೇರಿದಂತೆ ದ್ರವ್ಯಗಳಿಂದ ಸೋಮವಾರ ಸಂಜೆ 6.30ರಿಂದ 8.30ರವೆರೆಗೆ ಎಣ್ಣೆಮಜ್ಜನ ಸೇವೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಅಮಾವಾಸ್ಯೆ ದಿನವಾದ ಮಂಗಳವಾರ ಮುಂಜಾನೆ ಬೆಳಗ್ಗೆ 3 ಗಂಟೆಯಿಂದ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತಿತರ ಸೇವೆ ನಡೆಸಲಾಯಿತು.
ವಿವಿಧ ಉತ್ಸವ: ಅಮಾವಾಸ್ಯೆ ಹಿನ್ನೆಲೆ ಶ್ರೀ ಕ್ಷೇತ್ರಕ್ಕೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಹುಣಸೂರು, ಪಿರಿಯಾಪಟ್ಟಣ, ಚಾಮರಾಜನಗರ, ನಂಜನಗೂಡು ಮತ್ತಿತರ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು.
ಹರಕೆ: ಭಕ್ತಾದಿಗಳು ಉರುಳು ಸೇವೆ, ಮುಡಿಸೇವೆ ಸಮರ್ಪಿಸಿ ಬೆಳ್ಳಂ ಬೆಳಗ್ಗೆಯೇ ಪುಣ್ಯಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಳಿಕ ಬಸವವಾಹನ, ಹುಲಿವಾಹನ, ರುದ್ರಾಕ್ಷಿ ಮಂಟಪೋತ್ಸವ ಉತ್ಸವಗಳಲ್ಲಿ ಭಾಗವಹಿಸಿದರು. ಈ ವೇಳೆ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಧವನ ಧಾನ್ಯ, ದ್ವಿದಳ ಧಾನ್ಯ, ಹಣ್ಣು ಹಂಪಲು ಹಾಗೂ ನಾಣ್ಯಗಳನ್ನು ಎಸೆದು ಭಕ್ತಿ ಮೆರೆದರು.
ಬಳಿಕ ರಜಾಒಡೆಯುವ ಸೇವೆ, ಪಂಜಿನ ಸೇವೆಗಳನ್ನು ನೆರವೇರಿಸಿದರು. ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ನಿರಂತರ ದಾಸೋಹ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
ಸಂಚಾರ ದಟ್ಟಣೆ:ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳು ಹೆಚ್ಚನ ಸಂಖ್ಯೆಯಲ್ಲಿ ತೆರಳುತ್ತಿದ್ದ ಹಿನ್ನೆಲೆ ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ವಾಪಸ್ಸಾಗುತ್ತಿದ್ದ ಹಿನ್ನೆಲೆ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ತಾಳಬೆಟ್ಟದ ತಿರುವು, ಕೌದಳ್ಳಿ ಗ್ರಾಮ, ಹನೂರು ಪಟ್ಟಣ ಸಏರಿದಂತೆ ಕೆಲವೆಡೆ ರಸ್ತೆ ತೀರಾ ಕಿರಿದಾದುದಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.