ಮಧುಗಿರಿ: ಸ್ವಾತಂತ್ರ್ಯ ಕಾಲದಿಂದಲೂ ಅಂಗನವಾಡಿ ನಾನಾ ಸಮಸ್ಯೆಗಳಿಂದ ಕೂಡಿದ್ದು, ಅಲ್ಲಿ ನಡೆಯುವ ಲೋಪಗಳು ಶಿಕ್ಷಣ ಇಲಾಖೆಗೆ ತಲೆನೋವನ್ನುಂಟು ಮಾಡಿವೆ. ಹಲವು ಕಡೆ ಸರ್ಕಾರದ ಅಳತೆಗಿಂತ ಕಡಿಮೆ ಆಹಾರ ನೀಡುತ್ತಿರುವ ಪ್ರಕರಣವು ಸಾಮಾನ್ಯವಾಗಿದೆ. ಈ ಸಮಸ್ಯೆಯಿಂದ ಮುಕ್ತರಾಗಲು ಸರ್ಕಾರ ಪ್ರತಿ ಅಂಗನವಾಡಿಗೆ ತೂಕದ ಯಂತ್ರವನ್ನು ನೀಡಿಬೇಕಿದೆ.
ತಾಲೂಕಿನಲ್ಲಿ 428 ಅಂಗನವಾಡಿಗಳಿದ್ದು, 67 ಬಾಡಿಗೆ, 5 ಬಾಡಿಗೆರಹಿತ, ಶಾಲಾ ಕಟ್ಟಡದಲ್ಲಿ 11, ಸಮುದಾಯ ಭವನದಲ್ಲಿ 19 ಹಾಗೂ ಸ್ವಂತ ಕಟ್ಟಡದಲ್ಲಿ 326 ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಅಂಗನವಾಡಿಗಳಲ್ಲಿ ಪ್ರಸ್ತುತ 1,450 ಬಾಣಂತಿಯರು, 1390 ಗರ್ಭಿಣಿಯರಿಗೆ ಆಹಾರವನ್ನು ನೀಡಲಾಗುತ್ತಿದ್ದು, ತೂಕದ ಯಂತ್ರದ ಸಮಸ್ಯೆಯಿಂದ ಅಳತೆಗಿಂತ ಕಡಿಮೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಕ್ಷೇತ್ರದಲ್ಲಿ 6-1 ವರ್ಷದ 1538, 1-2 ವರ್ಷದ 2966, 2-3 ವರ್ಷದ 2906, 3-5 ವರ್ಷದ 5485 ಹಾಗೂ 5-6 ವರ್ಷದ 1149 ಮಕ್ಕಳಿದ್ದು, 416 ಅಂಗನವಾಡಿ ಕಾರ್ಯ ಕರ್ತೆಯರು 365 ಸಹಾಯಕರು ಸೇರಿ ಒಟ್ಟು 17,665 ಮಕ್ಕಳಿಗೆ ಆಹಾರ ನೀಡಬೇಕಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವಿರಾರು ಕ್ವಿಂಟಲ್ ಆಹಾರ ಸಾಮಗ್ರಿ ಹಂಚಲು ಕನಿಷ್ಠ ಬೆಲೆಯ ತೂಕದ ಯಂತ್ರ ನೀಡದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಬಲ್ಪಿಗೆ ದುಡ್ಡು-ತೂಕದ ಯಂತ್ರಕ್ಕಿಲ್ಲ: 2019-20 ನೇ ಸಾಲಿನಲ್ಲಿ 16 ಲಕ್ಷ ಹಾಗೂ 2020-21 ರಲ್ಲಿ 18 ಲಕ್ಷ ಹಣವನ್ನು 326 ಸ್ವಂತ ಕಟ್ಟಡಗಳ ವಿದ್ಯುದೀಕರಣ ಮಾಡಲು ಹಣ ಬಿಡುಗಡೆಯಾಗಿದ್ದು, ಪ್ರತಿ ಕಟ್ಟಡಕ್ಕೆ 2 ಬಲ್ಪ್, 1 ಫ್ಯಾನ್, ಹಾಗೂ ಇತರೆ ಪರಿಕರಣಗಳ ಬಳಕೆಗೆ ಅನುಮತಿ ನೀಡಿದ ಸರ್ಕಾರ, ಕನಿಷ್ಠ ಬೆಲೆಯ ತೂಕದ ಯಂತ್ರ ಖರೀದಿಸಲು ನೀಡಿಲ್ಲ. ಎಲ್ಲ ಅಂಗನವಾಡಿಗಳು ಹಗಲಿನ ವೇಳೆ ತೆರೆದಿದ್ದು, ಬಳಕೆಯಾಗದ ಬಲ್ಪ್ ಗಳಿಗೆ ಹಣ ನೀಡಿದೆ. ಆದರೆ ಅಂಗನವಾಡಿಗಳ ಬಗ್ಗೆ ಸಾರ್ವಜನಿಕರಲ್ಲಿರುವ ಅಳತೆ ಮೋಸದ ಭಾವನೆ ತೊಡೆದು ಹಾಕಲು ತೂಕದ ಯಂತ್ರ ನೀಡಿದ್ದರೆ ಈ ಅಪವಾದದಿಂದ ದೂರವಾಗಬಹುದಿತ್ತು.
ಜಲಜೀವನ್ ಯೋಜನೆಯಲ್ಲಿ ನೀರು ಪೂರೈಕೆ: ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆಯಿಂದ ಜಲಜೀವನ್ ಯೋಜನೆಯಡಿ ತಾಲೂಕಿನ 310 ಶಾಲೆಗೆ 48.36 ಲಕ್ಷ, ಹಾಗೂ 313 ಅಂಗನವಾಡಿಗಳಿಗೆ ನೀರಿನ ಸಂಪರ್ಕ ಕಲ್ಪಿಸಲು 42.50 ಲಕ್ಷದ ವೆಚ್ಚದಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಇಲಾಖೆಯ ಎಇಇ ರಾಮದಾಸ್ ತಿಳಿಸಿದ್ದು, ತಲಾ ಕಟ್ಟಡಕ್ಕೆ 10-15 ಸಾವಿರ ವೆಚ್ಚ ಮಾಡಲಾಗುತ್ತಿದೆ. ಈ ಕಾಮಗಾರಿಯಲ್ಲಿ 1 ಸಿಂಟೆಕ್ಸ್, 3 ನಲ್ಲಿ ಸೇರಿದಂತೆ ವಿವಿಧ ಅನುಕೂಲ ಮಾಡುತ್ತಿದ್ದು, ಕೆಲಸ ಶೇ.70 ಪೂರ್ಣಗೊಂಡಿದೆ ಎಂದು ಜೆಇ ಕಿರಣ್ ತಿಳಿಸಿದ್ದಾರೆ.