ಕೆಲವು ಸಿನಿಮಾಗಳು ತನ್ನ ಪ್ರಯೋಗದ, ಹೊಸತನದ ಮೂಲಕ ಇಷ್ಟವಾಗುತ್ತಾ ಹೋಗುತ್ತವೆ. ಇಂತಹ ಸಿನಿಮಾಗಳು ಕಥೆಯ ಹಂಗನ್ನು ಮೀರಿ ನಿಲ್ಲುತ್ತವೆ ಕೂಡಾ. ಈ ವಾರ ತೆರೆಕಂಡಿರುವ “ಮೇಡ್ ಇನ್ ಚೈನಾ’ ಚಿತ್ರ ಒಂದು ಪ್ರಯೋಗಾತ್ಮಕ ಸಿನಿಮಾವಾಗಿ ಇಷ್ಟವಾಗುತ್ತದೆ.
ಇದು ಕನ್ನಡದ ಮೊಟ್ಟ ಮೊದಲ ವರ್ಚುವಲ್ ಸಿನಿಮಾ. ವರ್ಚುವಲ್ ಸಿನಿಮಾದ ಯಾವ ದೃಶ್ಯ ಕೂಡಾ ನೇರಾ ನೇರ ಇರುವುದಿಲ್ಲ, ವಿಡಿಯೋ ಕಾಲ್ ಮೂಲಕವೇ ಇಡೀ ಸಿನಿಮಾ ನಡೆಯುತ್ತದೆ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ, ಇಲ್ಲಿನ ದೃಶ್ಯಗಳನ್ನು ಕಟ್ಟಿಕೊಡುವುದು, ಒಂದಕ್ಕೊಂದು ಸನ್ನಿವೇಶಗಳನ್ನು ಜೋಡಿಸುವುದು ನಿಜಕ್ಕೂ ಸವಾಲಿನ ಕೆಲಸ. ಆ ನಿಟ್ಟಿನಲ್ಲಿ ನಿರ್ದೇಶಕ ಪ್ರೀತಂ ತೆಗ್ಗಿನಮನೆ ಪ್ರಯತ್ನವನ್ನು ಮೆಚ್ಚಲೇಬೇಕು.
ಇಡೀ ಸಿನಿಮಾವನ್ನು ಕಟ್ಟಿಕೊಡುವಲ್ಲಿ ಅವರ ಪ್ರಯತ್ನ, ಪೂರ್ವತಯಾರಿ ಇಲ್ಲಿ ಎದ್ದು ಕಾಣುತ್ತದೆ. ನಿರ್ದೇಶನದ ಜೊತೆಗೆ ಸವಾಲಿನ ಕೆಲಸವಿರುವುದು ಛಾಯಾಗ್ರಹಣ ಹಾಗೂ ಸಂಕಲನದಲ್ಲಿ. ಏಕೆಂದರೆ ಇಡೀ ಸಿನಿಮಾ ವರ್ಚುವಲ್ ನಲ್ಲಿ ನಡೆಯಬೇಕು. ಒಂದೇ ಸ್ಕ್ರೀನ್‌ಮೇಲೆ ಎರಡೆರಡು ಸನ್ನಿವೇಶಗಳು ಬರಬೇಕು, ಜೊತೆಗೆ ಸಿನಿಮಾದ ಫೀಲ್, ಟೋನ್ …ಎಲ್ಲವೂ ವರ್ಚುವಲ್ ಹಿನ್ನೆಲೆಯಲ್ಲೇ ಸಾಗಬೇಕು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೀತಂ ಸಾಕಷ್ಟು ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಏಕೆಂದರೆ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಹಾಗೂ ಸಂಕಲನ ಕೂಡಾ ಅವರದ್ದೇ. ಬೇರೆ ಭಾಷೆಗಳಲ್ಲಿ ಒಂದೆರಡು ವರ್ಚುವಲ್ ಸಿನಿಮಾಗಳು ಬಂದಿವೆ. ಆದರೆ, ಕನ್ನಡದಲ್ಲಿ ಇದು ಮೊದಲ ವರ್ಚುವಲ್ ಸಿನಿಮಾ. ಕನ್ನಡದ ಮೊದಲ ಪ್ರಯತ್ನ ತಕ್ಕಮಟ್ಟಿಗೆ ಫಲ ನೀಡಿದೆ ಎನ್ನಬಹುದು.
ಸಾಫ್ಟ್ವೇರ್ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತದೆ. ಆತ ಕೋವಿಡ್ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಕಾರಣ, ಆತನ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಆತನ ಪತ್ನಿ ತುಂಬು ಗರ್ಭಿಣಿ. ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ತೊಳಲಾಟ, ದುಗುಡ, ದುಃಖದ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಅಂಶವನ್ನು ವರ್ಚುವಲ್ ಹಿನ್ನೆಲೆಯಲ್ಲಿ ಕಟ್ಟಿಕೊಡಲಾಗಿದೆ.
ಮೊದಲೇ ಹೇಳಿದಂತೆ ಇದೊಂದು ಪ್ರಯೋಗಾತ್ಮಕ ಸಿನಿಮಾವಾಗಿರುವುದರಿಂದ ಇಲ್ಲಿ “ಕಲರ್‌ಫುಲ್’ ಲೊಕೇಶನ್, ವಿಭಿನ್ನ ಹಾವ-ಭಾವ, ಹಾಡು, ಫೈಟ್ ಯಾವುದನ್ನೂ ಬಯಸುವಂತಿಲ್ಲ. ಒಂದು ಕಥೆಯನ್ನು ಎಷ್ಟು ತೀವ್ರವಾಗಿ ಕಟ್ಟಿಕೊಡಬಹುದು, ಅಷ್ಟನ್ನು ಇಲ್ಲಿ ನೀಟಾಗಿ ಮಾಡಲಾಗಿದೆ. ಇಡೀ ಸಿನಿಮಾ ನಿಂತಿರುವುದು ಸಣ್ಣ ಸಣ್ಣ ಕುತೂಹಲ, ಎಮೋಶನ್ಸ್ ಮೇಲೆ. ಅದನ್ನು ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಒಂದು ಹೊಸ ಅನುಭವ ಬಯಸುವವರು “ಚೈನಾ’ ಪ್ರವಾಸ ಮಾಡಬಹುದು.
ಚಿತ್ರದಲ್ಲಿ ನಟಿಸಿರುವ ನಾಗಭೂಷಣ್, ಪ್ರಿಯಾಂಕಾ, ರವಿಭಟ್, ಅರುಣಾ ಬಾಲ ರಾಜ್ ಎಲ್ಲರೂ ತುಂಬಾ ಸಹಜವಾಗಿ ನಟಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.
ರವಿ ರೈ