ನವದೆಹಲಿ: ಮಂಗಳನ ಕಕ್ಷೆಯಲ್ಲಿ ತಿರುಗುತ್ತಿರುವ ಭಾರತದ ಮಾಮ್ ಬಾಹ್ಯಾಕಾಶ ನೌಕೆಯು ತನ್ನ ಜೀವಿತಾವಧಿಯನ್ನೂ ಮೀರಿ ಕೆಲಸ ಮಾಡುತ್ತಿದೆ!
ಈ ನೌಕೆಯ ಬಾಳಿಕೆಯ ಅವಧಿ ಇದ್ದಿದ್ದು 6 ತಿಂಗಳು. ಆದರೆ, ಮಂಗಳನ ಕಕ್ಷೆಯಲ್ಲಿ ಮಾಮ್ ನೌಕೆ ಸುತ್ತಲು ಆರಂಭಿಸಿ ಈಗ ಸರಿಯಾಗಿ 7 ವರ್ಷಗಳು ಸಂದಿವೆ. ಇದೊಂದು ಅತ್ಯಂತ ತೃಪ್ತಿದಾಯಕ ಅನುಭವ ಎಂದು ಮಂಗಳಯಾನದ ನೇತೃತ್ವ ವಹಿಸಿದ್ದ ಇಸ್ರೋ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಹೇಳಿದ್ದಾರೆ.
2013ರ ನ.5ರಂದು ಮಾಮ್ ಅನ್ನು ಇಸ್ರೋ ಉಡಾವಣೆ ಮಾಡಿತ್ತು. 2014ರ ಸೆ.24ರಂದು ಈ ಬಾಹ್ಯಾಕಾಶ ನೌಕೆಯು ಮಂಗಳನ ಕಕ್ಷೆ ತಲುಪಿತ್ತು. ನಂತರದಲ್ಲಿ ನಿರಂತರವಾಗಿ ತನ್ನ ಕಾರ್ಯ ನೆರವೇರಿಸುತ್ತಿರುವ ಮಾಮ್ ನೌಕೆಯು, ಇನ್ನೂ ಒಂದು ವರ್ಷ ಕಾಲ ಬಾಳಿಕೆ ಬರುವ ಸಾಧ್ಯತೆಯಿದೆ ಎನ್ನುತ್ತಾರೆ ಪ್ರೋಗ್ರಾಂ ಡೈರೆಕ್ಟರ್ ಎಂ. ಅಣ್ಣಾದುರೈ.
ಇದನ್ನೂ ಓದಿ:ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು
ಸಾಮಾನ್ಯವಾಗಿ ಅರ್ತ್ ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಕಾರ್ಯನಿರ್ವಹಣೆ ಅವಧಿ 7ರಿಂದ 9 ವರ್ಷಗಳಾಗಿರುತ್ತವೆ. ಆದರೆ, ಮಂಗಳ ಗ್ರಹದ ಸುತ್ತ ಕೂಡ ಬಾಹ್ಯಾಕಾಶ ನೌಕೆಯೊಂದು ಇಷ್ಟೊಂದು ದೀರ್ಘಾವಧಿ ಕಾರ್ಯನಿರ್ವಹಿಸುತ್ತಿರುವುದು ಅಚ್ಚರಿಯೇ ಸರಿ.
ಈ ನೌಕೆಯು ನಮಗೆ ಬಹಳಷ್ಟು ದತ್ತಾಂಶಗಳನ್ನೂ ಒದಗಿಸಿದೆ. ಬೇರೆ ಬೇರೆ ಋತುಗಳು ಮಂಗಳ ಗ್ರಹದ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಅಧ್ಯಯನ ಮಾಡಲೂ ಇದು ನೆರವಾಗಿದೆ ಎಂದೂ ಅಣ್ಣಾದುರೈ ಹೇಳಿದ್ದಾರೆ.