ಮದ್ದೂರು: ಜಾಗತೀಕರಣ ಹಾಗೂ ಆಮದು ಅರ್ಥ ವ್ಯವಸ್ಥೆಯಿಂದ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಹತಾಶನಾದ ರೈತ ಆತ್ಮಹತ್ಯೆಯತ್ತ ಮುಖಮಾಡಿದ್ದಾನೆ ಎಂದು ರೈತಪರ ಹೋರಾಟಗಾರ್ತಿ ನಂದಿನಿ ಜಯರಾಂ ವಿಷಾದಿಸಿದರು.
16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಆತ್ಮಹತ್ಯೆ-ರೈತರು ಬದುಕ ಬೇಡವೇ.? ಕುರಿತ ವಿಚಾರಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಅವರು, ಒಕ್ಕಲುತನ ಬೇಸಾಯ ದಿಂದ ಯುವ ಜನತೆ ಹಿಮ್ಮುಖವಾಗಿದ್ದು ಹಳ್ಳಿಗಳು ವೃದ್ಧಾಶ್ರಮ ಗಳಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವಕರನ್ನು ಕೃಷಿಯತ್ತ ಆಕರ್ಷಿಸಿ: ಗ್ರಾಮೀಣ ಯುವಜನತೆ ಕೃಷಿ ಕೈಬಿಟ್ಟು ಇಂದು ಮಹಾನಗರಗಳತ್ತ ಕಂಪನಿ, ಕಚೇರಿ ಕೆಲಸಗಳಲ್ಲಿ ಆಸಕ್ತ ತೋರಿ ವಲಸೆ ಹೋಗುತ್ತಿದ್ದಾರೆ. ಯುವಕರನ್ನು ಕೃಷಿಯತ್ತ ಸೆಳೆಯುವ ಬದಲಾವಣೆಗೆ ಸರ್ಕಾರಗಳು ವಿವಿಧ ಯೋಜನೆ ಜಾರಿಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕೃಷಿ ಸಂಬಂಧಿತ ತರಬೇತಿ, ಕಾರ್ಯಾಗಾರಗಳನ್ನು ಆಯೋಜಿಸಬೇಕು. ಅದಕ್ಕೆ ತಕ್ಕಂತೆ ಕೃಷಿಗೆ ಅಗತ್ಯ ಸವಲತ್ತು ಕಲ್ಪಿಸಬೇಕೆಂದರು.
ಸರ್ಕಾರಗಳ ವಿಮುಖ ನೀತಿ: ಆಡಳಿತ ನಡೆಸುವ ಸರ್ಕಾರಗಳು ವಿಮುಖ ನೀತಿಯಿಂದಾಗಿ ರೈತರನ್ನು ಹೀನಸ್ಥಿತಿಗೆ ಕೊಂಡೊಯ್ದಿದೆ. ದೇಶದೆಲ್ಲೆಡೆ ಸಹಕಾರಿ ಮನೋಭಾವ ಕಣ್ಮರೆಯಾಗಿದ್ದು, ಕಾರ್ಪೊ ರೆಟ್ ಕಂಪನಿಗಳ ಕೈ ಮೇಲಾಗುವ ಮೂಲಕ ಬಂಡವಾಳ ಶಾಹಿಗಳ ಅಟ್ಟಹಾಸ ಮೇರೆ ಮೀರಿದೆ. ಸರ್ಕಾರಿ ನೌಕರರ ವೇತನ ಶೇ.360 ಹೆಚ್ಚಳವಾಗುತ್ತಿದ್ದರೆ, ರೈತರ ಅಗತ್ಯಗಳಾದ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೃಷಿ ಉತ್ಪನ್ನಗಳು ಇಳಿಕೆಯಾಗದ ಹಿನ್ನೆಲೆಯಲ್ಲಿ ರೈತರು ವ್ಯವಸಾಯದಿಂದ ದೂರವಾಗುತ್ತಿದ್ದಾರೆ ಎಂದು ತಿಳಿಸಿದರು.
ಅನ್ನದಾತರ ನಿರ್ಲಕ್ಷ್ಯ: ಮುಂದುವರಿದ ದೇಶಗಳಲ್ಲಿ ರೈತರ ಆತ್ಮಹತ್ಯೆಯಂತಹ ಪ್ರಕರಣಗಳೇ ವರದಿಯಾಗುತ್ತಿಲ್ಲ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ರೈತರಿಗೆ ಅಲ್ಲಿನ ಸರ್ಕಾರಗಳು ಪ್ರೋತ್ಸಾಹ ನೀಡುತ್ತವೆ. ಆದರೆ, ದುಡಿಯುವ ರೈತರನ್ನು ಗುಲಾಮರಂತೆ ಕಾಣುತ್ತಿವೆ. ಅವರ ಬದುಕಿನ ರಕ್ಷಣೆಗೆ ಸರ್ಕಾರಗಳು ಯಾವುದೇ ಕ್ರಮಕ್ಕೂ ಮುಂದಾಗದೆ ನಿರ್ಲಕ್ಷ್ಯ ವಹಿಸಿರುವುದು ಅನ್ನದಾತರ ಬದುಕು ಬರಡಾಗಲು ಕಾರಣವಾಗಿದೆ ಎಂದು ಹೇಳಿದರು.
ಭದ್ರ ಮಾರುಕಟ್ಟೆ ಒದಗಿಸಿ: 2017-18ನೇ ಸಾಲಿನಲ್ಲಿ ರಾಜ್ಯದ ರೈತರು ಮಾರಾಟ ಮಾಡಿದ ತಮ್ಮ ಆಹಾರ ಪದಾರ್ಥಗಳಿಂದಾಗಿ ಶೇ.21ರಷ್ಟು ನಷ್ಟ ಹೊಂದಿರುವ ವರದಿಯನ್ನು ಕೃಷಿ ಆಯೋಗ ಸರ್ಕಾರಕ್ಕೆ ವರದಿ ನೀಡಿದೆ. ಸರ್ಕಾರ ಭದ್ರವಾದ ಮಾರುಕಟ್ಟೆ ಒದಗಿಸದೆ ಆತ್ಮಹತ್ಯೆಗೆ ನೇರ ಕಾರಣವಾಗುತ್ತಿದೆ. ರಾಜ್ಯದಲ್ಲಿ 18.304 ಲಕ್ಷ ಟನ್ ಭತ್ತದ ಉತ್ಪಾದನೆ ಕಡಿಮೆಯಾಗಿ ಆಹಾರ ಭದ್ರತೆಗೆ ಪೆಟ್ಟಾಗಿದ್ದು ಕೃಷಿ ರೈತ ಉಳಿಯದಿದ್ದರೆ ದೇಶ ಆಹಾರ ಉತ್ಪಾದಕ ಸಂಸ್ಕರಣಾ ವಿತರಣಾ ಕಂಪನಿಗಳ ದಾಸಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ವಿಷಯ ಕುರಿತಾಗಿ ಕೆ.ಎಂ.ವಾಸು, ಸಾಮಾಜಿಕ ಜಾಲ ತಾಣ ಮತ್ತು ಯುವಜನಾಂಗ ವಿಷಯದ ಬಗ್ಗೆ ಪತ್ರಕರ್ತ ಎಂ.ಎನ್.ಯೋಗೇಶ್ ತಮ್ಮದೇ ಆದ ವಿಷಯ ಮಂಡನೆ ಮೂಲಕ ಅಕ್ಷರ ಪ್ರೇಮಿಗಳ ಮನಗೆದ್ದರು. ವಿಚಾರಗೋಷ್ಠಿ ಯಲ್ಲಿ ಡಾ.ಬೋರೇಗೌಡ ಚಿಕ್ಕಮರಳಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲೇಗೌಡ ಬೆಸಗರಹಳ್ಳಿ, ಪಣ್ಣೇದೊಡ್ಡಿ ಹರ್ಷ, ಹುಸ್ಕೂರು ಕೃಷ್ಣೇಗೌಡ ಹಾಜರಿದ್ದರು.