Advertisement

ತಮ್ಮಣ್ಣ ಗೆಲುವಿನ ಓಟಕ್ಕೆ ಬೀಳಲಿದೆಯೇ ಬ್ರೇಕ್‌?

12:37 AM Feb 28, 2023 | Team Udayavani |

ಮಂಡ್ಯ: ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಹಾಲಿ ಶಾಸಕ ಡಿ.ಸಿ.ತಮ್ಮಣ್ಣಗೆ ಕಾಂಗ್ರೆಸ್‌ನಿಂದ ಪ್ರಬಲ ಪ್ರತಿಸ್ಪರ್ಧಿ ಯಾರು ಎಂಬ ಕುತೂಹಲ ಕೆರಳಿಸಿದೆ.

Advertisement

ಶಾಸಕ ಡಿ.ಸಿ.ತಮ್ಮಣ್ಣಗೆ ಕಳೆದ ಎರಡು ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆ ಎದುರಾಗಿತ್ತು. ಇದರಿಂದ ಸುಲಭವಾಗಿ ಗೆಲುವು ಸಾ ಸಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯು ಕಣಕ್ಕಿಳಿಯುತ್ತಿರುವುದರಿಂದ ತಮ್ಮಣ್ಣ ಗೆಲುವಿನ ಓಟಕ್ಕೆ ಬ್ರೇಕ್‌ ಬೀಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಟಿಕೆಟ್‌ ಘೋಷಣೆ
ಈಗಾಗಲೇ ಜೆಡಿಎಸ್‌ನಿಂದ ಹಾಲಿ ಶಾಸಕರಾಗಿರುವ ಡಿ.ಸಿ.ತಮ್ಮಣ್ಣ ಕಣಕ್ಕಿಳಿಯುವುದು ಖಚಿತವಾಗಿದೆ. ಬಿಜೆಪಿಯಿಂದ ಎಸ್‌.ಪಿ.ಸ್ವಾಮಿಗೆ ಟಿಕೆಟ್‌ ಘೋಷಣೆಯಾಗಿದೆ. ಉಳಿದಂತೆ ಕಾಂಗ್ರೆಸ್‌ನಿಂದ ಒಂದು ವರ್ಷದ ಹಿಂದೆಯೇ ಎಸ್‌.ಗುರುಚ ರಣ್‌ಗೆ ಟಿಕೆಟ್‌ ಎಂದು ಡಿ.ಕೆ.ಶಿವಕುಮಾರ್‌ ಘೋಷಿಸಿದ್ದರು. ಆದರೆ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಿಂದ ಸಮಾಜ ಸೇವಕ ಕದಲೂರು ಉದಯ್‌ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ಉದಯ್‌ ಕೈ ಸೇರಲಿದ್ದೇನೆ ಎಂದು ಘೋಷಣೆ ಮಾಡಿದ್ದರು.ಇವರಿಬ್ಬರಲ್ಲಿ ಯಾರಿಗೆ ಟಿಕೆಟ್‌ ಸಿಗ ಲಿದೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ.

ಕೈಗೆ ಒಳೇಟಿನ ಗುದ್ದು: ಮದ್ದೂರು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿರುವ ಸಂಗತಿ. ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಕಾಂಗ್ರೆಸ್‌-ಜೆಡಿಎಸ್‌ನದ್ದೇ ಆರ್ಭಟ. ಆದರೆ ಕಳೆದ ಎರಡು ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ ಪ್ರದರ್ಶನ ಅಷ್ಟಕ್ಕಷ್ಟೇ. ಅಭ್ಯರ್ಥಿ ಹಾಗೂ ಮುಖಂಡರ ನಡುವಿನ ಒಳಜಗಳ, ಹೊಂದಾಣಿಕೆ ರಾಜಕಾರಣ ಹಾಗೂ ಭಿನ್ನಾಭಿಪ್ರಾಯಗಳೇ ಹೆಚ್ಚು. ಇದರಿಂದ ಕಾಂಗ್ರೆಸ್‌ ಕಳೆದ 15 ವರ್ಷಗಳಿಂದ ಇಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಅದರಂತೆ ಈ ಬಾರಿಯೂ ಒಳೇಟು ಬೀಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಕದಲೂರು ಉದಯ್‌ಗೆ ಟಿಕೆಟ್‌ ನೀಡಿದರೆ, ಮೂಲ ಕಾಂಗ್ರೆಸ್‌ ಕಾರ್ಯಕರ್ತರು ಬಂಡಾಯವೇಳುವ ಸಾಧ್ಯತೆ ಹೆಚ್ಚಿದ್ದು, ಇದು ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಬಲ:
ಇದುವರೆಗೂ ಮದ್ದೂರು ಕ್ಷೇತ್ರದಲ್ಲಿ ಬಿಜೆಪಿಯ ಸಾಧನೆ ಶೂನ್ಯ. ಒಂದು ಬಾರಿಯೂ ಕಮಲ ಅರಳಿಲ್ಲ. ಆದರೆ ಈ ಬಾರಿ ಎಸ್‌.ಪಿ.ಸ್ವಾಮಿ ಸೇರ್ಪಡೆಯಿಂದ ಒಂದಿಷ್ಟು ಬಲ ಬಂದಂತಾಗಿದೆ. ಈಗಾಗಲೇ ಪಕ್ಷ ಸಂಘಟನೆ ಮಾಡುತ್ತಿರುವ ಸ್ವಾಮಿ ಸ್ಪರ್ಧೆಗೆ ಸಿದ್ಧತೆ ಆರಂಭಿಸಿದ್ದಾರೆ. ಜೆಡಿಎಸ್‌ ಪಕ್ಷದ ಮತಗಳ ಮೇಲೆ ಸೆಳೆಯುವ ಮೂಲಕ ತಮ್ಮಣ್ಣಗೆ ಟಕ್ಕರ್‌ ಕೊಡಲು ಮುಂದಾಗಿದ್ದಾರೆ. ಇನ್ನೊಂದೆಡೆ ಸುಮಲತಾ ಅವರೂ ಬಿಜೆಪಿಯಿಂದ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement

ತಮ್ಮಣ್ಣಗೆ ಕಂಟಕವಾಗಲಿದ್ದಾರಾ ಉದಯ್‌, ಸ್ವಾಮಿ?: ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎಸ್‌. ಪಿ.ಸ್ವಾಮಿ ಸ್ಪರ್ಧಿಸಿದರೆ ಚುನಾವಣೆಯಲ್ಲಿ ಜೆಡಿಎಸ್‌ ಮತಗಳನ್ನು ಹೆಚ್ಚು ಸೆಳೆಯುತ್ತಾರೆ. ಇದರಿಂದ ತಮ್ಮಣ್ಣಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ವೈಯಕ್ತಿಕ ವರ್ಚಸ್ಸಿನಿಂದ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಕದಲೂರು ಉದಯ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ತಮ್ಮಣ್ಣಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ. ಇದರಿಂದ ಉದಯ್‌ ಹಾಗೂ ತಮ್ಮಣ್ಣ ನಡುವೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ಶಾಸಕ ತಮ್ಮಣ್ಣ ನಿದ್ದೆಗೆಡಿಸುವಂತೆ ಮಾಡಿದೆ.

ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ ಸುಮಲತಾ?
ಮಾ.11ರಂದು ಮದ್ದೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್‌ ಸಮಾವೇಶ ನಡೆಸಲಾಗುತ್ತಿದೆ. ಆ ಸಮಾವೇಶದಲ್ಲಿಯೇ ಸಂಸದೆ ಸುಮಲತಾ ಅಂಬರೀಷ್‌ ಬಿಜೆಪಿ ಸೇರ್ಪಡೆಯಾಗಲಿದ್ದು, ಮದ್ದೂರು ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎಸ್‌.ಪಿ.ಸ್ವಾಮಿಗೆ ಟಿಕೆಟ್‌ ಎನ್ನಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ರಾಜಕೀಯ ಬೆಳವಣಿಗೆಗಳಿಂದ ಎಸ್‌.ಪಿ.ಸ್ವಾಮಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿ, ಸುಮಲತಾ ಅವರನ್ನು ಮದ್ದೂರಿನಿಂದ ಕಣಕ್ಕಿಳಿಸುವ ಪ್ಲ್ಯಾನ್‌ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next