Advertisement

“ಮಾಡಾವು ವಿದ್ಯುತ್‌ ಉಪ ಕೇಂದ್ರವೇ ಪರಿಹಾರ’

05:04 PM Feb 23, 2017 | |

ಪುತ್ತೂರು: ತಾಲೂಕಿನಲ್ಲಿ ವಿತರಣೆ ಜಾಲದ ಕೊರತೆ ಕಾರಣದಿಂದ ವಿದ್ಯುತ್‌ ಕಡಿತ ಉಂಟಾಗುತ್ತಿದ್ದು, ಮಾಡಾವಿನಲ್ಲಿ 110 ಕೆ.ವಿ. ಸಬ್‌ಸ್ಟೇಶನ್‌ ಕಾಮಗಾರಿ ಪೂರ್ಣಗೊಂಡರೆ ಈ ಸಮಸ್ಯೆಗೆ ತಾರ್ಕಿಕ ಪರಿಹಾರ ಸಿಗಲಿದೆ ಎಂದು ಮೆಸ್ಕಾಂ ಪುತ್ತೂರು ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ನಾರಾಯಣ ಪೂಜಾರಿ ಹೇಳಿದರು.

Advertisement

ಪುತ್ತೂರು ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.ಪದೇ ಪದೇ ವಿದ್ಯುತ್‌ ಕಡಿತವಾಗುತ್ತಿರುವ ಬಗ್ಗೆ ಗ್ರಾಹಕರ ಪ್ರಶ್ನೆಗೆ ಉತ್ತರಿಸಿದ ಅವರು, ಪುತ್ತೂರು ಉಪವಿಭಾಗ ಮೆಸ್ಕಾಂ ವ್ಯಾಪ್ತಿಯು ಪುತ್ತೂರು ಮತ್ತು ಸುಳ್ಯ ತಾಲೂಕನ್ನು ಒಳಗೊಂಡಿದೆ. ಇಲ್ಲಿ 110 ಕೆ.ವಿ. ಸಬ್‌ ಸ್ಟೇಷನ್‌ ಮತ್ತು 33/11 ಕೆ.ವಿ.ಯ 8 ಸಬ್‌ಸ್ಟೇಶನ್‌ ಗಳಿವೆ. ಒಟ್ಟು 70 ಎಂ.ವಿ. ವಿದ್ಯುತ್‌ ಪೂರೈಕೆಯ ಆವಶ್ಯಕತೆ ಇದೆ. ಆದರೆ ಬನ್ನೂರು ಮೆಸ್ಕಾಂನಲ್ಲಿ 40 ಎಂ.ವಿ. ಸಾಮರ್ಥ್ಯದ ಪರಿವರ್ತಕ ಮಾತ್ರ ಇದೆ. ಹಾಗಾಗಿ ಏಕಕಾಲದಲ್ಲಿ ಎಲ್ಲ ಫೀಡರ್‌ಗಳಿಂದ ವಿದ್ಯುತ್‌ ಹರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಫೀಡರ್‌ ವ್ಯಾಪ್ತಿಯಲ್ಲಿ ಅರ್ಧ ಅಥವಾ ಒಂದು ತಾಸು ವಿದ್ಯುತ್‌ ವ್ಯತ್ಯಯ ಉಂಟಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಮಾಡಾವಿನಲ್ಲಿ ಸಬ್‌ಸ್ಟೇಶನ್‌ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ. ಇದಕ್ಕೆ ಕಾರಣ ಏನು ಎಂದು ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ, ತಾಲೂಕು ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಾರಾಯಣ ಪೂಜಾರಿ, ಐದು ವರ್ಷಗಳ ಹಿಂದೆ ಕಾಮಗಾರಿ ಆರಂಭಗೊಂಡಿದೆ. ಆದರೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಕೆ ಆದ ಕಾರಣ, ಅದರ ವಿಚಾರಣೆಗೆ ಸಾಕಷ್ಟು ಸಮಯಾವಕಾಶ ತಗಲಿದೆ. ಈಗ ಬಹುತೇಕ ಸಮಸ್ಯೆ ಪರಿಹಾರ ಆಗಿದೆ. 125 ಟವರ್‌ ಪೂರ್ಣಗೊಂಡಿದ್ದು, ಶೇ. 80ರಷ್ಟು ಕಾಮಗಾರಿ ಮುಗಿದಿದೆ. ಆರು ತಿಂಗಳಲ್ಲಿ ಸಬ್‌ ಸ್ಟೇಶನ್‌ ಕಾರ್ಯಾರಂಭಿಸಲಿದೆ. ಅನಂತರ ಪುತ್ತೂರು ಮತ್ತು ಮಾಡಾವು 110 ಕೆ.ವಿ. ಸಬ್‌ಸ್ಟೇಷನ್‌ನಿಂದ 33/11 ಕೆ.ವಿ. ಸಬ್‌ಸ್ಟೇಶನ್‌ಗಳನ್ನು ವಿಭಜಿಸಿ ವಿದ್ಯುತ್‌ ಹರಿಸಲಾಗುವುದು. ಇದರಿಂದ ಒತ್ತಡ ನಿವಾರಣೆಗೊಂಡು, ವಿದ್ಯುತ್‌ ಕಡಿತ ಸಮಸ್ಯೆ ನೀಗಲಿದೆ ಎಂದು ಅವರು ಮಾಹಿತಿ ನೀಡಿದರು.

ತಂತಿ ಮೇಲಿನ ಮರದ ಗೆಲ್ಲು ಕಡಿಯಿರಿ
ಗ್ರಾಹಕ ಬಾಬು ರೈ ಮಾತನಾಡಿ, ಬೆಟ್ಟಂಪಾಡಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್‌ ತಂತಿ ಮೇಲೆ ಮರದ ಗೆಲ್ಲು ಚಾಚಿದ್ದು, ತೆರವು ಕಾರ್ಯ ಸಮರ್ಪಕವಾಗಿ ಆಗಬೇಕು. ಕೆಲವೆಡೆ ಮುಖ್ಯ ರಸ್ತೆಗಳಲ್ಲಿ ಮಾತ್ರ ಗೆಲ್ಲು ತೆರವು ಮಾಡಲಾಗಿದೆ. ಒಳ ರಸ್ತೆಗಳ ಬದಿ, ಕಾಡಿನ ಕಡೆಗಳಲ್ಲಿ ತೆರವು ಕಾರ್ಯ ನಡೆದಿಲ್ಲ ಎಂದು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣ ಪೂಜಾರಿ, ವಿದ್ಯುತ್‌ ತಂತಿ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿರುವ ಗೆಲ್ಲು ತೆರವು ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 19 ಸೆಕ್ಟರ್‌ಗಳಲ್ಲಿ 183 ಜನರನ್ನು ಹೊಸ ದಾಗಿ ನೇಮಕಾತಿ ಆದ ಲೈನ್‌ ನಿರ್ವಾಹಕರನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Advertisement

ಕಟಾವು ಸಂದರ್ಭ ಮಾಹಿತಿ ನೀಡಿ
ಬಾಬು ರೈ ಅವರು ಮಾತನಾಡಿ, ತೋಟಗಳಲ್ಲಿ ವಿದ್ಯುತ್‌ ತಂತಿ ಹಾದು ಹೋಗಿದ್ದು, ತೆಂಗಿನಕಾಯಿ, ಅಡಿಕೆ ಕೊಯ್ಯುವ ಸಂದರ್ಭದಲ್ಲಿ ವಿದ್ಯುತ್‌ ತಂತಿ ತಾಗಿ ಪ್ರಾಣ ಹಾನಿ ಆದ ಘಟನೆ ಸಾಕಷ್ಟು ಸಂಭವಿಸಿದೆ. ಹಾಗಾಗಿ ಮುಂಜಾಗ್ರತೆ ಕ್ರಮವಾಗಿ ಇಲಾಖೆಯೇ ಕೇಬಲ್‌ ಅಳವಡಿಸಲು ಅವಕಾಶ ಇದೆಯೇ ಎಂದು ಅವರು ಪ್ರಶ್ನಿಸಿದರು.

ಉತ್ತರಿಸಿದ ಅಧಿಕಾರಿ, ನಿಯಮ ಪ್ರಕಾರ ತಂತಿ ಹಾದು ಹೋಗಿರುವ ಸ್ಥಳದಿಂದ ಇಂತಿಷ್ಟು ದೂರದಲ್ಲಿ ಕೃಷಿ ಮಾಡಬೇಕು ಎಂದಿದೆ. ಆದರೆ ಬಹುತೇಕರು ತಂತಿಯ ಅಡಿಯಲ್ಲಿಯೇ ಅಡಿಕೆ, ತೆಂಗಿನ ಗಿಡ ನೆಡುತ್ತಾರೆ. ಇದರಿಂದ ಅಪಾಯ ಸಂಭವಿಸುತ್ತದೆ. ಹಾಗಾಗಿ ತಂತಿ ಹಾದು ಹೋಗಿರುವ ತೋಟದ ಮಧ್ಯೆ ಇಲಾಖೆ ವತಿಯಿಂದ ಕೇಬಲ್‌ ಹಾಕಲು ಅವಕಾಶ ಇಲ್ಲ. ಜನರೇ ಸ್ವಯಂ ಜಾಗೃತಿಯಿಂದ ಕೇಬಲ್‌ ಹಾಕಿಕೊಳ್ಳಬೇಕು. ಒಂದು ವೇಳೆ ಕೃಷಿ ಉತ್ಪನ್ನಗಳ ಕಟಾವಿನ ಸಂದರ್ಭದಲ್ಲಿ ಒಂದೆರಡು ತಾಸು ವಿದ್ಯುತ್‌ ವ್ಯತ್ಯಯ ಮಾಡುವಂತೆ ಇಲಾಖೆಯ ಗಮನಕ್ಕೆ ತಂದರೆ ಸಹಕಾರ ನೀಡುತ್ತೇವೆ ಎಂದು ಅವರು ಮಾಹಿತಿಯಿತ್ತರು. 

ಸ್ಥಳಾವಕಾಶಕ್ಕೆ ಮನವಿ
ಟಿ.ಸಿ. ನಿರ್ಮಾಣಕ್ಕೆ ಮೆಸ್ಕಾಂ ಇಲಾಖೆಗೆ ಅನೇಕ ಸರಕಾರಿ ಸ್ಥಳದ ಅವಶ್ಯಕತೆ ಇದ್ದು, ತಾ.ಪಂ. ಸ್ಥಳ ಒದಗಣನೆಯ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮೆಸ್ಕಾಂ ಅಧಿಕಾರಿಗಳು ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ ಅವರಿಗೆ ಮನವಿ ಮಾಡಿದರು. ಈ ಬಗ್ಗೆ ಸ್ಪಂದನೆ ನೀಡುವುದಾಗಿ ಅಧ್ಯಕ್ಷರು ಭರವಸೆಯಿತ್ತರು.ವಿದ್ಯುತ್‌ ಗ್ರಾಹಕರು ವಿವಿಧ ಸಮಸ್ಯೆಗಳನ್ನು ಮನವಿ ರೂಪದಲ್ಲಿ ಅಧಿಕಾರಿಗಳ ಮುಂದಿಟ್ಟರು.

ಗುಣಮಟ್ಟದ ವಿದ್ಯುತ್‌ ನೀಡಿ
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಬೇಸಗೆ ಕಾಲದಲ್ಲಿ ಜನರಿಗೆ ವಿದ್ಯುತ್‌ ಸಮಸ್ಯೆ ಉಂಟಾಗಬಾರದು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಇಲಾಖೆ ಮಾಡಬೇಕು ಎಂದು ಅವರು ಹೇಳಿದರು.

ವಿದ್ಯುತ್‌ ಕಡಿತ ಬೇಡ
ಪರೀಕ್ಷಾ ಸಂದರ್ಭ ಸಮೀಪಿಸುತ್ತಿರುವ ಕಾರಣ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ಈ ಹೊತ್ತು ಪಠ್ಯಾಭ್ಯಾಸ ಅನಿವಾರ್ಯವಾಗಿದೆ. ಅದೇ ರೀತಿ ಬೇಸಗೆಯ ಕಾರಣ ಕೃಷಿ ಚಟುವಟಿಕೆಗಳಿಗೂ ನೀರಿನ ಆವಶ್ಯಕತೆ ಅಧಿಕವಾಗಿದೆ. ಹಾಗಾಗಿ ಮುಂದಿನ ಮೂರು ತಿಂಗಳು ವಿದ್ಯುತ್‌ ಕಡಿತ ಮಾಡಬಾರದು ಎಂದು ಗ್ರಾಹಕರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ನಾರಾಯಣ ಪೂಜಾರಿ, ಅನಿವಾರ್ಯ ಸಂದರ್ಭ ಹೊರತುಪಡಿಸಿ, ಉದ್ದೇಶಪೂರ್ವಕವಾಗಿ ಕಡಿತ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next