ವಸಂತಿ ರಾಮ ಭಟ್ ಅವರ ನಿವಾಸ ಕಿದಿಯೂರಿನ “ದೇವಿಕೃಪಾ’ದಲ್ಲಿ ನಡೆದ ಸಂಗೀತ ಸರಣಿ ಕಾರ್ಯಕ್ರಮದ ಏಳನೇ ಆವೃತ್ತಿಯಲ್ಲಿ, ಸರೋಜಾ ಆರ್. ಆಚಾರ್ಯ ಅವರ ಹಾಡುಗಾರಿಕೆ ನಡೆಯಿತು.ತೋಡಿ ರಾಗದ ಏರನಾಪೈ ವರ್ಣದ ಎರಡನೇ ಕಾಲದ ಹಾಡುವಿಕೆಯೊಂದಿಗೆ ಕಛೇರಿ ಶುರುವಾಯಿತು. ನಂತರ ಕೇದಾರಗೌಳ ರಾಗದ ನೀಲಕಂಠಂ ಭಜೇ ಹಂ ಕ್ಷಿಪ್ರ ಗತಿಯ ಆಲಾಪನೆ, ಚುಟುಕಾದ ಸ್ವರ ಕಲ್ಪನೆಯೊಂದಿಗೆ ಮೂಡಿ ಬಂತು. ತರುವಾಯ ನಟಭೈರವಿಯ ಸೊಗಸಾದ ಆಲಾಪನೆಯೊಂದಿಗೆ ಶ್ರೀ ವಲ್ಲೀದೇವಸೇನಾಪತೇ ಚಿಕ್ಕ ಚಿಕ್ಕ ಮನೋರಂಜಕವಾದ ಕಲ್ಪನಾ ಸ್ವರಗಳೊಂದಿಗೆ ಮನ ರಂಜಿಸಿತು. ಮುಂದೆ ದ್ವಿಜಾವಂತಿಯಲ್ಲಿ ನಿಧಾನ ಗತಿಯ, ಗಂಭೀರವಾದ ಅಖೀಲಾಂಡೇಶ್ವರಿ, ಕಾಪಿ ರಾಗದಲ್ಲಿ ಆಚಾರವಿಲ್ಲದ ನಾಲಗೆ ದಾಸರ- ಕೀರ್ತನೆ, ತದನಂತರ ಪ್ರಧಾನ ರಾಗವಾಗಿ ಕಲ್ಯಾಣಿಯನ್ನು ಎತ್ತಿಕೊಂಡರು.
ವಿಸ್ತಾರವಾದ ರಾಗಾಲಾಪನೆ, ತ್ಯಾಗರಾಜರ ನಿಧಿಚಾಲ ಸುಖಮಾ ಕೃತಿಯ ಸಾಂಪ್ರದಾಯಿಕ ಪಾಠಾಂತರದ ಪ್ರಸ್ತುತಿ, ಮಮತಾ ಬಂಧನದಲ್ಲಿ ಅಚ್ಚುಕಟ್ಟಾದ ನೆರೆವಲ್, ಸ್ವರಪಸ್ತಾರದೊಂದಿಗೆ ಮೂಡಿ ಬಂತು. ಕೊನೆಯಲ್ಲಿ ಶ್ರೀರಂಗ ಬಾರನೇ (ಖಮಾಚ್), ರಾಗಮಾಲಿಕೆಯಲ್ಲಿ ತೀರಾದ ವಿಳೆಯಾಡು ಪಿಳ್ಳೆ„ತಮಿಳು ರಚನೆ, ಅಘಮದ ಖಂಡನ (ದೇಶ್), ಪ್ರಭು ಮೇರೆ (ಸಿಂಧು ಭೈರವಿ) ಹಾಗೂ ಮಂಗಳದೊಂದಿಗೆ ಕಛೇರಿ ಸಮಾಪನಗೊಂಡಿತು.
ಪಕ್ಕವಾದ್ಯದಲ್ಲಿ ವಸಂತಿ ರಾಮ ಭಟ್ ವಯೊಲಿನಿನಲ್ಲಿ, ದೇವೇಶ್ ಭಟ್ ಮೃದಂಗದಲ್ಲಿ ಸಹಕಾರವನ್ನಿತ್ತು ಭೇಷ್ ಎನಿಸಿಕೊಂಡರು. ಗೊಂದಲಗಳಿಲ್ಲದ ಶುದ್ಧವಾದ ಸ್ವರ ಪ್ರಸ್ತಾರಗಳು, ಚುರುಕಿನ ರಾಗಾಲಾಪನೆಗಳು ಕಛೇರಿಯ ಯಶಸ್ಸಿಗೆ ಪೂರಕವಾದವು. ನಟಭೈರವಿಯ ಶ್ರೀ ವಲ್ಲೀದೇವಸೇನಾಪತೇ, ಜಾವಳಿಯನ್ನು ನೆನಪಿಸಿದ ಖಮಾಚಿನ ದೇವರ ನಾಮ, ತಮಿಳಿನ ರಾಗಮಾಲಿಕೆ ಶ್ರೋತೃಗಳಿಗೆ ಹೆಚ್ಚು ಹತ್ತಿರವಾದವು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮ ಒಂದು ಹಳೆಯ ಮದರಾಸಿ ಗಾಯನದ ಗ್ರಾಮ್‌ಫೋನ್ ರೆಕಾರಿxಂಗ್ ಆಲಿಕೆಯಂತೆ ಭಾಸವಾಯಿತು.
ವಿದ್ಯಾಲಕ್ಷ್ಮೀ ಕಡಿಯಾಳಿ