Advertisement

ಲಕ್ಷಾಂತರ ಭಕ್ತರಿಂದ ಮಾದಪ್ಪನ ದರ್ಶನ

07:46 AM Mar 05, 2019 | Team Udayavani |

ಹನೂರು: ಮಹಾಶಿವರಾತ್ರಿ ಹಿನ್ನೆಲೆ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರಿಗೆ ಬಿಲ್ವಾರ್ಚನೆ, ವಿಭೂತಿ ಅರ್ಚನೆ, ಅಭಿಷೇಕ ಪೂಜಾ ಕೈಂಕರ್ಯಗಳು ವಿಧಿವಿಧಾನಗಳೊಂದಿಗೆ ಜರುಗಿದವು. ಮಹಾಶಿವರಾತ್ರಿ ಹಿನ್ನೆಲೆ ಕಳೆದ ಮೂರ್‍ನಾಲ್ಕು ದಿನಗಳಿಂದ ಪಾದಯಾತ್ರೆ ಮತ್ತ ವಾಹನಗಳ ಮೂಲಕ ಮಾದಯ್ಯನಗಿರಿ ತಲುಪಿರುವ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ಮಹದೇಶ್ವರನ ದರ್ಶನ ಪಡೆದರು.

Advertisement

ಬಳಿಕ ಭಕ್ತಾದಿಗಳು ಬಸವವಾಹನ, ಹುಲಿವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ ಭಾಗವಹಿಸಿ ಹರಕೆ ಸಲ್ಲಿಸಿದರು. ಈ ವೇಳೆ ಭಕ್ತಾದಿಗಳು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ಧಾನ್ಯಗಳು, ಚಿಲ್ಲರೆ ನಾಣ್ಯಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಯುವಕರು ವಾದ್ಯಮೇಳಕ್ಕೆ ತಕ್ಕಂತೆ ಕುಣಿತ ಹಾಕಿ ಸಂಭ್ರಮಿಸಿದರು.

ಗರ್ಭಗುಡಿ ಸಿಂಗಾರ: ಶಿವರಾತ್ರಿ ಹಿನ್ನೆಲೆ ಮಹದೇಶ್ವರ ಬೆಟ್ಟದ ಗರ್ಭಗುಡಿ ಮತ್ತು ಗರ್ಭಾಂಕಣವನ್ನು ವಿಶೇಷವಾಗಿ ಹೂ ತಳಿರು ತೋರಣ, ಜೋಳದ ತೆನೆ, ಮಾವಿನಕಾಯಿ ಮತ್ತು ವಿವಿಧ ಬಗೆಯ ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಜೊತೆಗೆ ದೇವಾಲಯದ ಮುಖ್ಯಗೋಪುರ, ರಾಜಗೋಪುರ, ಪ್ರವೇಶ ದ್ವಾರ ಅಳಮಬಾಡಿ ಬಸವೇಶ್ವರ, ವಾಣಿಜ್ಯ ಸಂಕೀರ್ಣಗಳು, ಪ್ರವೇಶ ದ್ವಾರ ಇನ್ನಿತರ ಕಡೆಗಳಲ್ಲಿ ಝಗಮಗಿಸುವ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ನಿರಂತರ ದರ್ಶನ: ಮಹಾ ಶಿವರಾತ್ರಿ ಹಿನ್ನೆಲೆ ಶ್ರೀಕ್ಷೇತ್ರದಲ್ಲಿ ನಿರಂತರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ರಾತ್ರಿ 10.30 ರಿಂದ ಬೆಳಗಿನ ಜಾವ 3.30ರವರೆಗೆ ದೇವಾಲಯವನ್ನು ಬಂದ್‌ ಮಾಡಲಾಗುತಿತ್ತು. ಆದರೆ, ಸೋಮವಾರ ಮಹಾಶಿವರಾತ್ರಿ ಹಿನ್ನೆಲೆ ದೇವಾಲಯವನ್ನು ಬಂದ್‌ ಮಾಡದೆ ನಿರಂತರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಶಿವರಾತ್ರಿ ಜಾಗರಣೆ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಜಾಗರಣೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿನಿತ್ಯ ಜರುಗುವ ತ್ರಿಕಾಲ ಪೂಜೆಗಳಿಗಿಂತ ಮಧ್ಯರಾತ್ರಿ 12 ಗಂಟೆಗೆ ಒಂದು ಹೆಚ್ಚುವರಿ ಅಭಿಷೇಕ ಪೂಜೆ ಏರ್ಪಡಿಸಲಾಗಿದೆ.

Advertisement

ಶಿವರಾತ್ರಿ ಜಾಗರಣೆಯ ಪೂಜಾ ಕೈಂಕರ್ಯಗಳು ಬೇಡಗಂಪಣ ಪದ್ಧತಿಯಂತೆ ಜರುಗಲಿವೆ. ಅಲ್ಲದೇ ಶಿವರಾತ್ರಿ ಜಾಗರಣೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಮನರಂಜನೆ ನೀಡುವ ಸಲುವಾಗಿ ಹರಿಕಥೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next