ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು ಕಳೆದ 34 ದಿನಗಳಲ್ಲಿ ದಾಖಲೆಯ 2.57 ಕೋಟಿ ನಗದು, 127 ಗ್ರಾಂ ಚಿನ್ನ ಮತ್ತು 3.447 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆಯು ತಡರಾತ್ರಿ 12 ಗಂಟೆಯವರೆಗೂ ಜರುಗಿತು. ಈ ಬಾರಿ ಕಳೆದ 28 ದಿನಗಳ ಅವಧಿಯಲ್ಲಿ ಮಲೆ ಮಾದಪ್ಪನ ಹುಂಡಿಯಲ್ಲಿ 2,57,25,859 ರೂ. ನಗದು, 127 ಗ್ರಾಂ ಚಿನ್ನದ ಪದಾರ್ಥಗಳು ಮತ್ತು 3.447 ಕೆ.ಜಿ. ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿವೆ.
ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನ್ನಿಧ್ಯದಲ್ಲಿ ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯಭವಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ, ಮಹದೇಶ್ವರ ಬೆಟ್ಟ ಎಸ್‌ಬಿಐ ಬ್ಯಾಂಕಿನ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಇದ್ದರು. ಹುಂಡಿ ಎಣಿಕೆ ಪ್ರಕ್ರಿಯೆಯು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಜರುಗಿತು.
ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಹೆಚ್ಚಿನ ಭಕ್ತಾದಿಗಳು ಭೇಟಿ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಕಳೆದ 34 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದರು, ರಾಜ್ಯದ ರಾಮನಗರ, ಚನ್ನಪಟ್ಟಣ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಭಾಗಗಳಿಂದ ಹೆಚ್ಚಿನ ಭಕ್ತಾದಿಗಳು ಪಾದಯಾತ್ರೆಯಲ್ಲಿ ಹಾಗೂ ನೆರೆಯ ತಮಿಳುನಾಡು ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು. ಅಲ್ಲದೆ ವಾರಾಂತ್ಯ, ಸರ್ಕಾರಿ ರಜಾ ಸಂದರ್ಭದಲ್ಲಿಯೂ ಹೆಚ್ಚಿನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.