ಬೆಂಗಳೂರು: ನಾಪತ್ತೆಯಾಗಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಲೋಕಾಯುಕ್ತ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅವರ ಪುತ್ರ ಪ್ರಶಾಂತ್ ಅವರನ್ನು ವಶಕ್ಕೆ ಪಡೆ ಯಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ವಿಶೇಷ ತಂಡ ರಚಿಸಿ 3 ದಿನಗಳಿಂದ ರಾಜ್ಯದ ವಿವಿಧೆಡೆ ಹುಡುಕಾಟ ನಡೆಸಿದರೂ ಶಾಸಕರ ಸಣ್ಣ ಸುಳಿವೂ ಸಿಕ್ಕಿಲ್ಲ. ವಿರೂಪಾಕ್ಷಪ್ಪ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ತನಿಖಾಧಿಕಾರಿಗಳು ನೋಟಿಸ್ ನೀಡಿ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಪೊಲೀಸರು ಸಿಆರ್‌ಪಿಸಿ 41(ಎ) ಅಡಿಯಲ್ಲಿ ವಿರೂಪಾಕ್ಷಪ್ಪಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ. ವಿರೂಪಾಕ್ಷಪ್ಪ ಮನೆ, ಕೆಎಸ್‌ಡಿಎಲ್ ಕಚೇರಿ, ಚನ್ನಗಿರಿಯಲ್ಲಿರುವ ಮನೆಗೆ ನೋಟಿಸ್ ಅಂಟಿಸಲು ಸಿದ್ಧತೆ ನಡೆಸಲಾಗಿದೆ. ಇದರ ನಡುವೆಯೇ ವಿರೂಪಾಕ್ಷಪ್ಪ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾ ಗುತ್ತಾರಾ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
8.12 ಕೋಟಿ ರೂ.ಗೆ ಸಾಕ್ಷ್ಯ ಸಂಗ್ರಹಿಸುತ್ತಿರುವ ಪೊಲೀಸರು
ಮಾಡಾಳು ವಿರೂಪಾಕ್ಷಪ್ಪ ಅವರ ಬೆಂಗಳೂರು ಸಂಜಯನಗರದ ಮನೆಯಲ್ಲಿ ಪತ್ತೆಯಾಗಿರುವ 6.10 ಕೋ. ರೂ. ಹಾಗೂ ಕಚೇರಿಯಲ್ಲಿ ಸಿಕ್ಕಿದ 2.2 ಕೋ. ರೂ. ಹಣದ ಮೂಲಕ್ಕೆ ಸಂಬಂಧಿಸಿದ ಸಾಕ್ಷ್ಯ ಕಲೆ ಹಾಕುವುದರಲ್ಲಿ ಲೋಕಾ ಪೊಲೀಸರ ಒಂದು ತಂಡ ಕಾರ್ಯಾಚರಣೆ ನಡೆಸುತ್ತಿದೆ. ಇದು ದಾಖಲೆ ಇಲ್ಲದ ಹಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದಲ್ಲದೇ ಮಕ್ಕಳು, ಕುಟುಂಬಸ್ಥರ ಹೆಸರಿನಲ್ಲಿ ನೂರಾರು ಕೋಟಿ ರೂ. ಆಸ್ತಿ ಹೊಂದಿರುವುದು ಗೊತ್ತಾಗಿದೆ.
Related Articles
ಆರೋಪಿಗಳನ್ನು ವಶಕ್ಕೆ ಪಡೆಯಲು ಅರ್ಜಿ ಸಲ್ಲಿಕೆ
ಆರೋಪಿ ಪ್ರಶಾಂತ್ ಮಾಡಾಳು ಹಾಗೂ ಇತರ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ 1 ವಾರಗಳ ಕಾಲ ವಶಕ್ಕೆ ನೀಡುವಂತೆ ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಅರ್ಜಿ ವಿಚಾರಣೆಗೆ ಬರಲಿದೆ. ಕ್ರೆಸೆಂಟ್ ರಸ್ತೆಯ ಕಚೇರಿಯಲ್ಲಿ ಸಿಕ್ಕಿದ 2.2 ಕೋಟಿ ರೂ. ನಗದು ಹಾಗೂ ಜಪ್ತಿ ಮಾಡಿರುವ ಇನ್ನಿತರ ದಾಖಲೆಗಳನ್ನು ಮುಂದಿಟ್ಟು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಲೋಕಾಯುಕ್ತ ಸಜ್ಜಾಗಿದೆ.