ಹೊಸದಿಲ್ಲಿ: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್ ಜಾಮೀನು ನೀಡಿರುವ ವಿಚಾರದ ಬಗ್ಗೆ ತ್ವರಿತ ವಿಚಾರಣೆ ನಡೆಯಬೇಕು ಎಂದು ಕೋರಿಕೊಂಡ ಕರ್ನಾಟಕ ಲೋಕಾಯುಕ್ತವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.
ನ್ಯಾ| ಎಸ್.ಕೆ. ಕೌಲ್ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಾಗ, ಲೋಕಾ ಯುಕ್ತ ಪರ ವಕೀಲ ಬಸವಪ್ರಭು ಪಾಟೀಲ್, “ಜಾಮೀನು ಪಡೆದುಕೊಂಡಿರುವವರು ಹಾಲಿ ಶಾಸಕರಾಗಿದ್ದು, ತ್ವರಿತವಾಗಿ
ವಿಚಾರಣೆ ಮಾಡಬೇಕು ಎಂದು ಅರಿಕೆ ಮಾಡಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ| ಕೌಲ್ “ತುರ್ತು ವಿಚಾರಣೆಯ ಅಗತ್ಯವೇನಿದೆ? ಜಾಮೀನು ನೀಡುವಾಗ ಹೈಕೋರ್ಟ್ ಎಲ್ಲ ಅಂಶಗಳನ್ನು ಗಮನಿಸಿದೆ ಅಲ್ಲವೇ? ನೀವು ರದ್ದು ಮಾಡುವಂತೆ ಅರಿಕೆ ಮಾಡಿದ್ದೀರಿ. ಇಂಥ ಅವಸರ ಏಕೆ’ ಎಂದು ಪ್ರಶ್ನಿಸಿದರು. ಇದರ ಹೊರತಾಗಿಯೂ ಕೂಡ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸುವುದಾಗಿ ನ್ಯಾಯಪೀಠ ಹೇಳಿತು.
ಇದಕ್ಕೂ ಮೊದಲು ಲೋಕಾಯುಕ್ತ ಪರ ನ್ಯಾಯವಾದಿ ಬಸವಪ್ರಭು ಪಾಟೀಲ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಅರಿಕೆ ಮಾಡಿ, “ಮೇಲ್ಮನವಿ ಅರ್ಜಿಯ ವಿಚಾರಣೆ ಕ್ಷಿಪ್ರವಾಗಿ ನಡೆಯಬೇಕು. ಆರೋಪಕ್ಕೆ ಗುರಿಯಾಗಿರುವ ಶಾಸಕರಿಗೆ ತ್ವರಿತವಾಗಿ ಜಾಮೀನು ನೀಡಿ, ಹೈಕೋರ್ಟ್ ತಪ್ಪು ಸಂದೇಶ ನೀಡಿದೆ ಎಂದರು.
ಅದಕ್ಕೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿಗಳು, “ನ್ಯಾಣ ಎಸ್.ಕೆ. ಕೌಲ್ ನೇತೃತ್ವದ ನ್ಯಾಯಪೀಠದ ಮುಂದೆ ಅರಿಕೆ ಮಾಡಿಕೊಳ್ಳಬಹುದು. ಅವರೂ ಸಾಂವಿಧಾನಿಕ ಪೀಠದ ಭಾಗವೇ ಆಗಿದ್ದಾರೆ. ಸದ್ಯ ಅವರು ಬೇರೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಅವರಿಗೆ ಕರ್ನಾಟಕ ಲೋಕಾಯುಕ್ತ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದು’ ಎಂದರು.