ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಸೇರಿದ ಸಂಜಯ ನಗರದಲ್ಲಿರುವ ಮನೆಗೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮತ್ತೊಂದೆಡೆ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ವಿರೂಪಾಕ್ಷಪ್ಪ ಲೋಕಾಯುಕ್ತ ಅಧಿಕಾರಿಗಳ ಎದುರು ಹಾಜರಾಗಬೇಕಿದೆ.
ಈ ಮಧ್ಯೆ ವಿರೂಪಾಕ್ಷಪ್ಪ ಜಾಮೀನು ಪಡೆದ ಬಳಿಕ ಮಾಧ್ಯಮಗಳಿಗೆ ಮಾತನಾಡುವ ವೇಳೆ, ಯಾರೋ ಅಪರಿಚಿತರು ಮನೆಗೆ ಬಂದು ಹಣ ಇಟ್ಟು ಹೋಗಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ವಿಚಾರಣೆಗೆ ಬರಲೇಬೇಕು
ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿರುವ ವಿರೂಪಾಕ್ಷಪ್ಪ ಗುರುವಾರ ಲೋಕಾಯುಕ್ತ ಪೊಲೀಸರ ಎದುರು ಹಾಜರಾಗಲೇಬೇಕಿದೆ.
ಜಾಮೀನು ಆದೇಶ ಪ್ರತಿ ಲಭ್ಯವಾದ 48 ಗಂಟೆಯೊಳಗೆ ತನಿಖಾಧಿಕಾರಿ ಎದುರು ಹಾಜರಾಗಲು ಕೋರ್ಟ್ ಸೂಚಿಸಿದೆ.