ಕಾಸರಗೋಡು: ಮಾಡಕ್ಕಲ್ ತೂಗು ಸೇತುವೆ ಮುರಿದು ಬಿದ್ದು ನಾಲ್ಕು ವರ್ಷ ಸಂದರೂ ಇನ್ನೂ ನೂತನ ಸೇತುವೆ ನಿರ್ಮಾಣಗೊಂಡಿಲ್ಲ. ಈ ಕಾರಣದಿಂದ ಸ್ಥಳೀಯ ನಿವಾಸಿಗಳು ವಿವಿಧ ಸಮಸ್ಯೆಗಳಿಗೆ ತುತ್ತಾಗಿದ್ದು ಹಿನ್ನೀರು ದಾಟಬೇಕಾದರೆ ದೋಣಿ ಸವಾರಿ ಮಾತ್ರವೇ ದಾರಿಯಾಗಿದೆ.
Advertisement
ನಾಲ್ಕು ವರ್ಷಗಳ ಹಿಂದೆ ಕುಸಿದು ಬಿದ್ದ ಮಾಡಕ್ಕಲ್ ತೂಗುಸೇತುವೆಗೆ ಬದಲಿಯಾಗಿ ನೂತನ ಸೇತುವೆಯ ನಿರೀಕ್ಷೆಯಲ್ಲಿದ್ದ ಸ್ಥಳೀಯರು ಇಂದೂ ಸೇತುವೆಗಾಗಿ ಎದುರು ನೋಡುತ್ತಿದ್ದಾರೆ. ಬಹಳಷ್ಟು ಆಳ ಹಾಗೂ ಸುಳಿಯಿರುವ ಕವ್ವಾಯಿ ಹಿನ್ನೀರು ದಾಟಬೇಕಾದರೆ ದೋಣಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನೆಲೆಗೊಂಡಿದೆ. ವಲಿಯಪರಂಬ ನಿವಾಸಿಗಳು ಹಿನ್ನೀರಿನ ಅತ್ತಯಿತ್ತ ಸಾಗಬೇಕಾದರೆ ದೋಣಿ ಅಲ್ಲದೆ ಬೇರೆ ಮಾರ್ಗವಿಲ್ಲ. ದಿನಾ ನೂರಾರು ಮಂದಿ ಹಿನ್ನೀರಿನ ಅಚೆ ತಲುಪಬೇಕಾದರೆ ದೋಣಿಯನ್ನೇ ಬಳಸುತ್ತಿದ್ದಾರೆ. ಈ ಪೈಕಿ ವಿದ್ಯಾರ್ಥಿಗಳೂ, ಕಾರ್ಮಿಕರೂ ಇದ್ದಾರೆ.
Related Articles
ತೂಗು ಸೇತುವೆ ಕೆಲವೇ ದಿನಗಳಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಿವಿಧ ತನಿಖೆ ನಡೆದಿತ್ತು. ಆದರೆ ಇನ್ನೂ ತೂಗು ಸೇತುವೆ ಕುಸಿದು ಬೀಳಲು ಸ್ಪಷ್ಟ ಕಾರಣವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಸ್ಥಳೀಯರು ನೂತನ ಸೇತುವೆಗಾಗಿ ಹಲವು ಮನವಿಗಳನ್ನು ನೀಡಿದ್ದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ. ಯುಡಿಎಫ್ ಸರಕಾರದ ಅವಧಿಯಲ್ಲಿ ಸೇತುವೆಗಾಗಿ ಹೋರಾಟ ನಡೆದಿತ್ತು. ಮನವಿಗಳ ಮಹಾಪೂರವೇ ಹರಿದು ಬಂದಿತ್ತು. ಅಂದು ಮನವಿಗಳನ್ನು ನೀಡಿದವರು, ಹೋರಾಟ ಮಾಡಿದವರು, ಸೇತುವೆ ಮುರಿದು ಬೀಳಲು ಕಾರಣದ ಕುರಿತು ಸಮಗ್ರ ತನಿಖೆಗಾಗಿ ಆಗ್ರಹಿಸಿದವರು ಇಂದು ಅಧಿಕಾರಕ್ಕೆ ತಲುಪಿದ್ದರೂ ಸ್ಥಳೀಯರಿಗೆ ಹಿನ್ನೀರು ದಾಟಲು ದೋಣಿ ಅಲ್ಲದೆ ಬೇರೆ ಮಾರ್ಗವಿಲ್ಲ.
Advertisement