ಪಣಜಿ: ವಿವಿಧ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಕರ್ನಾಟಕದ ಮೈಸೂರು ಮೂಲದ ಇಬ್ಬರನ್ನು ಮಡಗಾಂವ್ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೊಂಕಣ ರೈಲ್ವೇ ಪೋಲಿಸರು ಈ ಕ್ರಮ ಕೈಗೊಂಡಿದ್ದಾರೆ , ಇಬ್ಬರ ವಿರುದ್ಧವೂ ಕರ್ನಾಟಕದಲ್ಲಿ ವಿವಿಧ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ ಬಂಧಿತರನ್ನು ಅಶೋಕ್ ಕೃಷ್ಣಪ್ಪನ್ ಕುಮಾರ್ (27) ಮತ್ತು ಮಧು ಕೃಷ್ಣಪ್ಪನ್ ಕುಮಾರ್ (25) (ಇಬ್ಬರೂ ಆರ್. ಬಿಎಂಸಿ ನಗರ, ಮೈಸೂರು) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಇಬ್ಬರ ಬಳಿಯೂ ಹಲವು ಕಳ್ಳತನದ ದಾಖಲೆಗಳು ಲಭ್ಯವಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಈ ಇಬ್ಬರು ಆರೋಪಿಗಳನ್ನು ಬಂಧಿಸಿ ಹಾಜರುಪಡಿಸುವಂತೆ ಮೈಸೂರು ನ್ಯಾಯಾಲಯ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪೋಲಿಸರು ತೀವ್ರ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಶಂಕಿತರ ಬಗ್ಗೆ ಕರ್ನಾಟಕ ಪೊಲೀಸರು ಗೋವಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ಮಡಗಾಂವ್ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೇ ಪೊಲೀಸರಿಗೆ ಇಬ್ಬರು ಶಂಕಿತರು ಕಾಣಿಸಿಕೊಂಡಿದ್ದಾರೆ. ತಕ್ಷಣ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೈಸೂರು ಪೊಲೀಸರಿಗೆ ಒಪ್ಪಿಸಲಾಗಿದೆ.
ಕೊಂಕಣ ರೈಲ್ವೇ ಪೊಲೀಸ್ ಇನ್ಸ್‍ಪೆಕ್ಟರ್ ಸುನಿಲ್ ಗುಡ್ಲರ್, ಸಹಾಯಕ ನಿರೀಕ್ಷಕ ಮನೋಜ್ ಮಾಂಡ್ರೇಕರ್, ಕಾನ್‍ಸ್ಟೆಬಲ್‍ಗಳಾದ ಸತ್ಯವಾನ್ ನಾಯಕ್ ಮತ್ತು ಸತ್ಯವಾನ್ ಗಾಂವ್ಕರ್ ಅವರ ತಂಡ ಕಾರ್ಯಾಚರಣೆ ನಡೆಸಿತು.