Advertisement
ಗುಜರಾತ್‌ನ ತಾಂತ್ರಿಕ ವಿಶ್ವವಿದ್ಯಾಲಯದ ಇನೊವೇಶನ್ ಪರಿಷತ್ತು ಮತ್ತು ವಿನ್ಯಾಸ ಇನೋವೇಶನ್ ಕೇಂದ್ರ ಇಲೆಕ್ಟ್ರಿಕ್ ವಾಹನ ಸಹಿತವಾಗಿ ಒಂದೇ ಯಂತ್ರದಲ್ಲಿ ಸುಮಾರು 30 ತರಹದ ಕೃಷಿ ಉತ್ಪನ್ನಗಳನ್ನು ರಾಶಿ ಮಾಡುವ ಯಂತ್ರವನ್ನು ಅವಿಷ್ಕರಿಸಿದ್ದು, ವಿಶ್ವಕರ್ಮ ಅಗ್ರಿಕಲ್ಚರ್ ಕಂಪೆನಿ ಇದನ್ನು ರಾಜ್ಯದ ರೈತರಿಗೆ ಪರಿಚಯಿಸಲು ಮುಂದಾಗಿದೆ.
Related Articles
Advertisement
ಇಲೆಕ್ಟ್ರಿಕ್ ವಾಹನ ಸಮೇತ 30 ತರಹದ ಕೃಷಿ ಉತ್ಪನ್ನಗಳ ರಾಶಿ ಮಾಡುವ ಯಂತ್ರ 2.5ರಿಂದ 3 ಲಕ್ಷ ರೂ.ನಲ್ಲಿ ರೈತರಿಗೆ ದೊರೆಯಲಿದೆ. ಮಧ್ಯಮ ರೈತರು ಸಹ ಇದನ್ನು ಖರೀದಿಸಬಹುದಾಗಿದೆ. ಜತೆಗೆ ರೈತರಿಗೆ ನಿರ್ವಹಣೆ ಸುಲಭವಾಗಿಸುವ ವ್ಯವಸ್ಥೆ ಅಳವಡಿಸಲಾಗಿದೆಯಂತೆ. ರೈತರಿಗೆ ಪ್ರಯೋಜನಕಾರಿ ಆಗಬಹುದಾದ ಸುಲಭ ನಿರ್ವಹಣೆ ಹಾಗೂ ತೈಲ ಬಳಕೆ ಇಲ್ಲದ ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನ ಸಮೇತ 30 ಕೃಷಿ ಉತ್ಪನ್ನಗಳ ರಾಶಿ ಯಂತ್ರದ ಉತ್ಪಾದನೆ ರೈತರಿಗೆ ನೀಡಲು ಮುಂದಾಗಿರುವುದು ಸಂತಸ ತರಿಸಿದೆ ಎಂಬುದು ವಿಶ್ವಕರ್ಮ ಅಗ್ರಿಕಲ್ಚರ್ ಕಂಪೆನಿಯ ಸಂಸ್ಥಾಪಕರಾದ ವೃತಿಕ ಪಂಚಾಲ, ಅರುಣ ಪಂಚಾಲ ಅವರ ಅನಿಸಿಕೆ.
ಒಂದು ತಾಸಿಗೆ ಒಂದೂವರೆ ಟನ್ ಶೇಂಗಾ ರಾಶಿ: ಕೃಷಿ ಉತ್ಪನ್ನಗಳ ರಾಶಿ ಯಂತ್ರ ಒಟ್ಟು 24 ಬ್ಲೇಡ್‌ಗಳನ್ನು ಒಳಗೊಂಡಿದೆ. ರೈತರು ರಾಶಿ ಮಾಡುವ ಸಂದರ್ಭದಲ್ಲಿ ಬೇರೆ ಬೇರೆ ಕೃಷಿ ಉತ್ಪನ್ನಗಳಿಗೆ ಬ್ಲೇಡ್‌ಗಳನ್ನು ಬದಲಾಯಿಸಬೇಕಾದ ಪದ್ಧತಿ ಸದ್ಯದ ರಾಶಿ ಯಂತ್ರಗಳಲ್ಲಿ ಇದೆ. ಆದರೆ ಈ ಯಂತ್ರದಲ್ಲಿ ಯಾವುದೇ ಬ್ಲೇಡ್‌ಗಳನ್ನು ಬದಲಾಯಿಸುವ ಅಗತ್ಯವಿಲ್ಲ. ಯಂತ್ರಕ್ಕೆ ವೇಗ ನಿಯಂತ್ರಕ ವ್ಯವಸ್ಥೆ ಅಳವಡಿಸಲಾಗಿದೆ. ಇದು ಮೂರು ಹಂತದ ವೇಗ ಹೊಂದಿದೆ. ಅತಿಯಾದ ವೇಗ, ಮಧ್ಯಮ ವೇಗ, ನಿಧಾನ ವೇಗ ವ್ಯವಸ್ಥೆ ಇರಿಸಲಾಗಿದೆ. ಯಾವ ಉತ್ಪನ್ನದ ರಾಶಿಗೆ ಯಾವ ವೇಗ ಇರಿಸಬೇಕೆಂಬ ಸ್ಪಷ್ಟ ಮಾಹಿತಿಯನ್ನು ಯಂತ್ರದೊಂದಿಗೆ ನೀಡಲಾಗುತ್ತಿದೆ. ರೈತರು ಆಯಾ ಬೆಳೆಯ ರಾಶಿಗೆ ತಕ್ಕಂತೆ ವೇಗ ನಿಗದಿ ಪಡಿಸಿದರೆ ಸಾಕು ಸುಲಭವಾಗಿ ರಾಶಿ ಮಾಡಬಹುದಾಗಿದೆ.
ಹೆಸರು, ಜೋಳ, ಮೆಕ್ಕೆಜೋಳ, ಶೇಂಗಾ, ಭತ್ತ, ಸಿರಿಧಾನ್ಯಗಳು, ಕಡಲೆ, ತೊಗರಿ ಹೀಗೆ ಸುಮಾರು 30 ತರಹದ ಕೃಷಿ ಉತ್ಪನ್ನಗಳ ಒಂದೇ ಯಂತ್ರದಲ್ಲಿ ರಾಶಿ ಮಾಡಬಹುದಾಗಿದೆ. ಒಂದು ತಾಸಿಗೆ ಸುಮಾರು ಒಂದು ಟನ್‌ನಷ್ಟು ಶೇಂಗಾ ರಾಶಿ ಮಾಡಬಹುದಾದ ಸಾಮರ್ಥ್ಯ ಈ ಯಂತ್ರ ಹೊಂದಿದೆಯಂತೆ. ಜತೆಗೆ ರಾಶಿ ಮಾಡುವಾಗ ರೈತರಿಗೆ ಯಾವುದೇ ಅಪಾಯ ಆಗದಂತೆಯೂ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ವಾಹನ ಸಮೇತ ಯಂತ್ರದ ನಿರ್ವಹಣೆ ವಿಚಾರಕ್ಕೆ ಬಂದರೆ ಸುಲಭ-ಸರಳ ರೀತಿಯ ನಿರ್ವಹಣೆ ವ್ಯವಸ್ಥೆ ಕಲ್ಪಿಸಲಾಗಿದೆ. ವರ್ಷಕ್ಕೊಮ್ಮೆ ಬ್ಲೇಡ್‌ಗಳ ಸ್ಥಿತಿಗತಿ ಗಮನಿಸಿ ಬದಲಾಯಿಸಬೇಕಾಗುತ್ತದೆ. ಇಲೆಕ್ಟ್ರಿಕ್ ವಾಹನ 8 ವರ್ಷಗಳು ಹಾಗೂ ಬ್ಯಾಟರಿ 3-5 ವರ್ಷಗಳವರೆಗೆ ವಾರೆಂಟಿ ಹೊಂದಿದೆ.
ರೈತರಿಗೆ ಪ್ರಯೋಜನಕಾರಿ ಕೃಷಿ ಉತ್ಪನ್ನಗಳ ರಾಶಿ ಯಂತ್ರದ ಜತೆಗೆ ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನ ನೀಡಲಾಗುತ್ತಿದೆ. ವಿಎ ಇ-100 ವಾಹನವನ್ನು ಹೊಲ-ಗದ್ದೆಗಳಿಗೂ ಸುಲಭವಾಗಿ ಬಳಕೆಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಹೊಲಗಳಲ್ಲಿ ಕೆಸರು ಇರುತ್ತದೆ ಅದಕ್ಕೂ ಹೊಂದಿಕೊಳ್ಳುವ ರೀತಿ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಹೊಸತನ ಸೇರಿಸುವ ಚಿಂತನೆ ಹೊಂದಲಾಗಿದೆ. –ಕಾರ್ತಿಕ ಅರ್ಥೇಯ, ವಿಶ್ವಕರ್ಮ ಅಗ್ರಿಕಲ್ಚರ್
-ಅಮರೇಗೌಡ ಗೋನವಾರ