Advertisement

ಜಾಹೀರಾತು ಕಂಪನಿಗಳಿಗೆ ಸಿಗಲಿಲ್ಲ ದಂಡದಿಂದ ಮುಕ್ತಿ

11:33 AM Jan 28, 2017 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾಹೀರಾತು ಫ‌ಲಕಗಳನ್ನು ಹಾಕಿದ ಕಂಪನಿಗಳಿಗೆ ಜಾಹೀರಾತು ತೆರಿಗೆ ಹಾಗೂ ದಂಡ ಪಾವತಿಯಿಂದ ವಿನಾಯ್ತಿ ನೀಡಲು ಹೈಕೋರ್ಟ್‌ ಮತ್ತೂಮ್ಮೆ ನಿರಾಕರಿಸಿದೆ.  ಪೂರ್ಣ ಜಾಹೀರಾತು ತೆರಿಗೆ, ಶೇ.50 ಬಡ್ಡಿ ಮತ್ತು ದಂಡವನ್ನು ಫೆಬ್ರವರಿ 10ರೊಳಗೆ ಪಾವತಿಸಬೇಕು. ಇಲ್ಲವೇ ಪರ್ಯಾಯ ಕಾನೂನಾತ್ಮಕ ಪರಿಹಾರಕ್ಕಾಗಿ ಸೂಕ್ತ ಮೇಲ್ಮನವಿ ಪ್ರಾಧಿಕಾರದ ಮೊರೆ ಹೋಗಬಹುದು ಎಂದು ಶುಕ್ರವಾರ ನಿರ್ದೇಶಿಸಿದೆ.

Advertisement

ಅನಧಿಕೃತವಾಗಿ ಜಾಹೀರಾತು ಫ‌ಲಕ ಅಳವಡಿಸಿದ್ದರ ಸಂಬಂಧ ಡಿಮ್ಯಾಂಡ್‌ ನೋಟಿಸ್‌ ಪ್ರಶ್ನಿಸಿ ರೀಟೇಲರ್‌ ಅಸೋಸಿಯೇಷನ್‌ ಆಫ್ ಇಂಡಿಯಾ (ಆರ್‌ಎಐ) ಹಾಗೂ ಇತರೆ 10 ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹೋರ್ಡಿಂಗ್‌ ಹಾಗೂ ಜಾಹೀರಾತು ಫ‌ಲಕ ಹಾಕಿದ ಕಂಪನಿಗಳು ತೆರಿಗೆ ಮತ್ತು ದಂಡವನ್ನು ಪಾವತಿಸಬೇಕು ಎಂದು 2016ರ ಡಿ.5ರಂದು ಆದೇಶಿಸಲಾಗಿದೆ. ಜಾಹೀರಾತು ಕಂಪನಿಗಳು ಈ ಆದೇಶ ಪಾಲಿಸುವುದಾದರೆ ಫೆಬ್ರವರಿ 10ರೊಳಗೆ ಪೂರ್ಣ ಜಾಹೀರಾತು ತೆರಿಗೆ, ಶೇ.50ರಷ್ಟು ಬಡ್ಡಿ ಮತ್ತು ದಂಡ ಮೊತ್ತವನ್ನು ಪಾವತಿಸಬೇಕು.

ನ್ಯಾಯಾಲಯದ ಆದೇಶ ಪ್ರಶ್ನಿಸುವುದಾರೆ ಆ ಸಂಬಂಧ ಸೂಕ್ತ ಮೇಲ್ಮನವಿ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಬಹುದು. ಅಥವಾ ಇದೇ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಧ್ಯಂತರ ಅರ್ಜಿ ಸಲ್ಲಿಸಬಹುದು. ಆ ಅರ್ಜಿಗಳನ್ನು ನ್ಯಾಯಾಲಯವು ಮುಂದೆ ಪ್ರತ್ಯೇಕವಾಗಿ ಪರಿಗಣಿಸಲಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.

ಈ ಮಧ್ಯೆ ನಗರದಲ್ಲಿ ಅನಧಿಕೃತವಾಗಿ 2,439 ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿತ್ತು. ಆ ಪೈಕಿ ಜನವರಿ 21ರವರೆಗೆ 2315 ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಾಗಿದೆ. ಉಳಿದ 124 ಹೋರ್ಡಿಂಗ್‌ಗಳನ್ನು ತೆರವುಗೊಳಿಸಬೇಕಿದೆ. ಆದರೆ, ಅನಧಿಕೃತವಾಗಿ ಅಳವಡಿಸಿರುವ ಐರನ್‌ ಸ್ಟ್ರಕ್ಚರ್‌ ಹೋರ್ಡಿಂಗ್‌ನ (ಕಬ್ಬಿಣ ಸ್ವರೂಪದ ಹೋರ್ಡಿಂಗ್‌) ತೆರವುಗೊಳಿಸಲು ಗುತ್ತಿಗೆ ಕೆರೆಯಲಾಗುತ್ತಿದೆ ಎಂದು ಜ.25ರಂದು ಎರಡನೇ ಪ್ರಗತಿ ವರದಿಯನ್ನು ಬಿಬಿಎಂಪಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. 

Advertisement

ಆದರೆ, ಆ ವರದಿಯಲ್ಲಿ ಅನಧಿಕೃತವಾಗಿ ಜಾಹೀರಾತು ಅವಳಡಿಸಿದ ಕಂಪನಿಗಳು, ಮತ್ತವುಗಳಿಂದ ತೆರಿಗೆ ಸಂಗ್ರಹಿಸಿದ ಕುರಿತ ಸಮರ್ಪಕವಾಗಿ ಅಂಕಿ-ಅಂಶಗಳನ್ನು ಸಲ್ಲಿಸದಿದ್ದನ್ನು ಗಮನಿಸಿದ ನ್ಯಾಯಾಲಯವು ಸೂಕ್ತ ಮಾಹಿತಿಯೊಂದಿಗೆ ಸಂಪೂರ್ಣ ವರದಿಯನ್ನು ಜ.27ರಂದು ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನ್ಯಾಯಾಲಯ ನಿರ್ದೇಶಿಸಿತ್ತು.

ಅದರಂತೆ ಶುಕ್ರವಾರ ಬಿಬಿಎಂಪಿಯು ಸಮಪರ್ಕವಾದ ಎರಡನೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಈ ವರದಿಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮಾರ್ಚ್‌ 1ಕ್ಕೆ ಮೂಂದೂಡಿ, ಅಂದು ಮೂರನೇ ಪ್ರಗತಿ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next