Advertisement

ವ್ಯಾಪಾರ, ಹೂಡಿಕೆಗೆ ಅನುಮತಿ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆ 

10:32 PM Aug 31, 2021 | Team Udayavani |

ದೇಶದಲ್ಲಿ ವಾಣಿಜ್ಯ ವ್ಯವಹಾರ, ಉದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯನ್ನು ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದರಂತೆ  “ಮಾಧ್ಯಮ್‌’ ಎನ್ನುವ ಡಿಜಿಟಲ್‌ ಪ್ಲಾಟ್‌ಫಾರ್ಮ್ ಅನ್ನು ಸಿದ್ಧಗೊಳಿಸಲಾಗುತ್ತಿದೆ. ಇದರಲ್ಲಿ ದೇಶದಲ್ಲಿ ಹೂಡಿಕೆಗೆ ಮತ್ತು ಉದ್ಯಮ ಸ್ಥಾಪನೆಗೆ ಪಡೆಯಬೇಕಿರುವ ಪೂರ್ವಾನುಮತಿ, ಮಂಜೂರಾತಿಗಳ ಬಗೆಗಿನ ವಿವರಗಳು ಮತ್ತು ಇವುಗಳಿಗಾಗಿ ಅರ್ಜಿ ಸಲ್ಲಿಕೆಗೆ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು.

Advertisement

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಈ ಪೋರ್ಟಲ್‌ ಅನ್ನು ಸಿದ್ಧಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ವ್ಯಾಪಾರ, ವಹಿವಾಟು ಮತ್ತು ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಪಡೆಯಬೇಕಿರುವ ಒಪ್ಪಿಗೆ, ಮಂಜೂರಾತಿ ನಿಯಮಾವಳಿಗಳೆಲ್ಲವನ್ನೂ ಕ್ರೋಡೀಕರಿಸಿ ಈ ಪೋರ್ಟಲ್‌ನಲ್ಲಿ ಅಳವಡಿಸಲಾಗಿದ್ದು  ಸದ್ಯ ಪರೀಕ್ಷಾ ಹಂತದಲ್ಲಿದೆ. ಮೊದಲ ಹಂತದಲ್ಲಿ ಈ ಏಕಗವಾಕ್ಷಿ ವ್ಯವಸ್ಥೆಗೆ 43 ಸರಕಾರಿ ಇಲಾಖೆಗಳು ಮತ್ತು 14 ರಾಜ್ಯಗಳನ್ನು ಸೇರ್ಪಡೆಗೊಳಿಸಲಾಗುವುದು.

“ಮಾಧ್ಯಮ್‌’ ಹೇಗೆ ಕೆಲಸ ಮಾಡುತ್ತದೆ? :

ದೇಶದಲ್ಲಿ ವ್ಯಾಪಾರ ಆರಂಭಿಸಲು ಅಗತ್ಯವಿರುವ ಕೇಂದ್ರ ಮತ್ತು ರಾಜ್ಯಸರಕಾರಗಳಿಂದ ಪಡೆಯಬೇಕಾಗಿರುವ ಎಲ್ಲ ತೆರನಾದ ಅನುಮತಿ, ಒಪ್ಪಿಗೆಗಳನ್ನು ಪಡೆಯಲು “ಮಾಧ್ಯಮ್‌’ ಒಂದು ಡಿಜಿಟಲ್‌ ವೇದಿಕೆಯಾಗಿರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿ ಅನುಮತಿ, ಒಪ್ಪಿಗೆಗಳ ಬಗ್ಗೆ ತಿಳಿಯಲು ಹೂಡಿಕೆದಾರರು ಒಂದು ಗುಂಪಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಒಂದೇ ಇಂಟರ್‌ಫೇಸ್‌ ಮೂಲಕ ಅರ್ಜಿ ಸಲ್ಲಿಸಿ ಅನಂತರ ಅಪ್ಲಿಕೇಶನ್‌ನ ಸ್ಥಿತಿಗತಿಯ ಕುರಿತು ತಿಳಿದುಕೊಳ್ಳಲು ಅನುಕೂಲಕರವಾಗಿದೆ.

ಕೃಷಿ, ರಕ್ಷಣ, ಕಾರ್ಪೋರೆಟ್‌ ವ್ಯವಹಾರ ಸಂಸ್ಥೆಗಳು ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಕೇಂದ್ರ ಸಚಿವಾಲಯಗಳು ಮತ್ತು 14 ರಾಜ್ಯಗಳ ವಿವಿಧ ಇಲಾಖೆಗಳಲ್ಲಿ 560ಕ್ಕಿಂತ ಹೆಚ್ಚು ಅರ್ಜಿಗಳು ಅನುಮೋದನೆಗಾಗಿ ಕಾಯುತ್ತಿವೆ ಎಂಬುದು ಈ ಪೋರ್ಟಲ್‌ನಿಂದ ತಿಳಿದುಬಂದಿದೆ.

Advertisement

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಕೇಂದ್ರ ಮತ್ತು ರಾಜ್ಯಗಳ ಅಸ್ತಿತ್ವದಲ್ಲಿರುವ ಕ್ಲಿಯರೆನ್ಸ್‌ ವ್ಯವಸ್ಥೆಯನ್ನು ಒಂದುಗೂಡಿಸಲು ಯೋಜನೆ ರೂಪಿಸಿದೆ. ಸಾಮಾನ್ಯ ನೋಂದಣಿ ನಮೂನೆಯನ್ನು ಭರ್ತಿ ಮಾಡಿ ಹೂಡಿಕೆದಾರರು ಕೇಂದ್ರ ಸರಕಾರದ ಪರವಾನಿಗೆಗೆ ಅರ್ಜಿ ಸಲ್ಲಿಸಬಹುದು. ಅನಂತರ ರಾಜ್ಯಗಳ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಹೂಡಿಕೆದಾರರು ಸಂಬಂಧಿತ ರಾಜ್ಯದ ನೋಂದಣಿ ನಮೂನೆಯನ್ನು ಭರ್ತಿ ಮಾಡಿ ಪರವಾನಿಗೆಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸಮಸ್ಯೆ ಎದುರಾಗಬಹುದೇ? :

ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯ ಕಲ್ಪನೆ ಉತ್ತಮವಾ ದರೂ ಇದರ ಅನುಷ್ಠಾನ ಕಷ್ಟಸಾಧ್ಯ ಎನ್ನುತ್ತಾರೆ ತಜ್ಞರು. ಆದರೂ ಇದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ, ಈ ಪೋರ್ಟಲ್‌ನಿಂದ ರಾಜ್ಯಗಳು ಮತ್ತು ಸಚಿವಾಲಯಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾದರೂ ಸುಗಮ ಅನುಷ್ಠಾನ ಇಲ್ಲಿ ನಿರ್ಣಾಯಕವಾಗಿರುತ್ತದೆ. ಇದಕ್ಕಾಗಿ ರಾಜ್ಯಗಳಲ್ಲಿ ಮೂಲ ಸೌಕರ್ಯಗಳು ಹೆಚ್ಚಾಗಬೇಕು. ಡಿಜಿಟಲ್‌ ಪ್ಲಾಟ್‌ಫಾರ್ಮ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುವುದು ಎಂಬುದು ಅವರ ಅಭಿಮತ.

ಏನು ಲಾಭ?  :

  1. ಸಾಮಾನ್ಯವಾಗಿ ಹೂಡಿಕೆಗಳನ್ನು ಮಾಡಲು ವಿವಿಧ ರಾಜ್ಯಗಳ ಮತ್ತು ಸರಕಾರಿ ಇಲಾಖೆಗಳ ಅನುಮೋದನೆ ಅಗತ್ಯವಿರುತ್ತದೆ. ಈ ಬಗ್ಗೆ ಹೂಡಿಕೆದಾರರಿಗೆ ಸಮರ್ಪಕ ಮಾಹಿತಿಯಾಗಲೀ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗೆಗಾಗಲೀ ತಿಳಿದಿರುವುದಿಲ್ಲ. ಇದಕ್ಕಾಗಿ ಹೂಡಿಕೆದಾರರು ಅಲೆದಾಡಬೇಕಾದ ಪರಿಸ್ಥಿತಿ ಇದೆ. ಮಾಧ್ಯಮ್‌ ಏಕಗವಾಕ್ಷಿ ವ್ಯವಸ್ಥೆ ಜಾರಿಯಾದ ಬಳಿಕ ಈ ಜಂಜಾಟ ನಿವಾರಣೆಯಾಗಲಿದೆ.
  2. ಇನ್ನು ಹೂಡಿಕೆದಾರರು ಮಾಹಿತಿ ಸಂಗ್ರಹಕ್ಕಾಗಿ ಮತ್ತು ಕ್ಲಿಯರೆನ್ಸ್‌ ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡಬೇಕಾದ ಅಗತ್ಯವಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಅನುಮೋದನೆಗಳು, ನವೀಕರಣ ಪ್ರಕ್ರಿಯೆಗಳನ್ನು ಹೆಚ್ಚು ಶ್ರಮವಿಲ್ಲದೆ ನಡೆಸಬಹುದಾಗಿದೆ. ಸಮಯದ ಉಳಿತಾಯವೂ ಆಗುವುದು.
  3. ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಇದು ಪ್ರಯೋಜನಕಾರಿಯಾಗಿದೆ.
  4. ಹೂಡಿಕೆದಾರರ ಪ್ರಶ್ನೆಗಳಿಗೂ ಪರಿಹಾರ ಒದಗಿಸುವ ವ್ಯವಸ್ಥೆ ಈ ಪೋರ್ಟಲ್‌ನಲ್ಲಿ ಇರಲಿದೆ.
  5. ಅನುಮೋದನೆಯ ಕಾಲಾವಧಿ ಪರಿಷ್ಕರಣೆಯಾಗದೇ ಇದ್ದರೆ ಆಯಾ ಸರಕಾರಿ ಇಲಾಖೆಗಳು ಹೂಡಿಕೆದಾರರ ಪ್ರಸ್ತಾವನೆ ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಯಲು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಹಕಾರಿಯಾಗಲಿದೆ.
  6. ಹೂಡಿಕೆದಾರರಿಗೆ ಸಮಗ್ರ ಮಾಹಿತಿಯನ್ನು ಒದಗಿಸುವುದರೊಂದಿಗೆ ವಿವಿಧ ಪಾಲುದಾರರಿಂದ ಅನುಮತಿ ಪಡೆಯಲು, ಸಮಯಕ್ಕೆ ಸರಿಯಾಗಿ ನವೀಕರಿಸಲು ಸಹಾಯ ಮಾಡುವುದು.
Advertisement

Udayavani is now on Telegram. Click here to join our channel and stay updated with the latest news.

Next