ನವದೆಹಲಿ: ಉಡುಪಿ ಜಿಲ್ಲೆಯ ಕೆಲವು ಸರಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂಬ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಮತ್ತೊಂದೆಡೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿವಾದದ ಕುರಿತು ಶನಿವಾರ (ಫೆ.05) ಟ್ವೀಟ್ ಮಾಡಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹೆಣ್ಣುಮಕ್ಕಳ ಮುಖ ನೋಡುವ ಆಸೆ ಯಾಕೆ?: ಹಿಜಾಬ್ ವಿವಾದದ ಕುರಿತು ಸಿ.ಎಂ.ಇಬ್ರಾಹಿಂ
ನಾವು ಇಂದು ಸರಸ್ವತಿ ದೇವಿಯ ಪೂಜೆಯ ದಿನವಾಗಿದ್ದು, ಇಂತಹ ಸಂದರ್ಭದಲ್ಲಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ ಎಂದು ರಾಹುಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
“ಹಿಜಾಬ್ ಅನ್ನು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗುವಂತೆ ಮಾಡುವ ಮೂಲಕ ನಾವು ಭಾರತದ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳಲು ಹೊರಟಂತಾಗಿದೆ. ಸರಸ್ವತಿ ಮಾತೆ ಎಲ್ಲರಿಗೂ ಜ್ಞಾನ ನೀಡುತ್ತಾಳೆ. ಆಕೆ ಭೇದ ಮಾಡುವುದಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಕುಂದಾಪುರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಆರಂಭಗೊಂಡಿದ್ದ ಹಿಜಾಬ್-ಕೇಸರಿ ಶಾಲು ವಿವಾದ ಶುಕ್ರವಾರ (ಫೆ.04) ಮೂರನೇ ದಿನಕ್ಕೆ ಕಾಲಿಟ್ಟಿದ್ದು,ಜತೆಗೆ ಕುಂದಾಪುರ, ಬೈಂದೂರು ಭಾಗದ ಇನ್ನಷ್ಟು ಕಾಲೇಜುಗಳಲ್ಲೂ ವಿವಾದ ಭುಗಿಲೆದ್ದಿತ್ತು.
ಕುಂದಾಪುರ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಬಂದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ವಿದ್ಯಾರ್ಥಿನಿಯರು ಸಂಜೆಯವರೆಗೂ ಕಾಲೇಜಿನ ಗೇಟಿನ ಮುಂದೆ ಕುಳಿತು, ಬಳಿಕ ಮನೆಗೆ ಮರಳಿದರು. ವಿವಾದದ ಹಿನ್ನೆಲೆಯಲ್ಲಿ ಕಾಲೇಜಿಗೆ ಫೆ.5ರಂದು ರಜೆ ಘೋಷಿಸಲಾಗಿದೆ.