Advertisement

ಮಾ.8 ಮಹಿಳಾ ದಿನಾಚರಣೆ;ಇವರು ನಮ್ಮೂರ ಸಾಧಕಿಯರು…ಗ್ರಾ.ಪಂ ಸದಸ್ಯೆ ಈಗ ರುದ್ರಭೂಮಿ ನಿರ್ವಾಹಕಿ

11:58 AM Mar 07, 2022 | Team Udayavani |

ವೃದ್ಧಾಶ್ರಮ ವಾಸಿಗಳಿಗೆ ಮಗಳಾಗಿ ಈ ಟೈಲರಮ್ಮ
ಕಟಪಾಡಿ: ಟೈಲರಿಂಗ್‌ ಕೆಲಸದ ಜತೆಗೆ ವೃದ್ಧಾಶ್ರಮ ವಾಸಿಗಳ ಬೇಡಿಕೆಯನ್ವಯ ಊಟ ಆಹಾರ ತಿನಿಸುಗಳನ್ನು ಸ್ವತಃ ಸಿದ್ಧಪಡಿಸಿ ಉಣಬಡಿಸುವ ಮಮತೆಯ ಸೇವಕಿ ವಿಶಾಲ ಸುವರ್ಣ ಕರ್ತವ್ಯದಿಂದಾಗಿ “ಅನ್ನಪೂರ್ಣೇಶ್ವರೀ’ ಅನಿಸಿಕೊಂಡಿದ್ದಾರೆ.

Advertisement

ಇವರ ಹೆಸರೂ, ಇವರ ಮನಸ್ಸೂ ವಿಶಾಲವೇ… ಕಟಪಾಡಿ ಏಣಗುಡ್ಡೆ ಅಗ್ರಹಾರ ಬಳಿ ಇರುವ ಇವರ ಮನೆಗೆ ಹೊಂದಿಕೊಂಡು ಪಾರ್ಶ್ವದಲ್ಲಿಯೇ “ಕಾರುಣ್ಯ’ ಆಶ್ರಯಧಾಮವಿದೆ. ಇಲ್ಲಿ ಪ್ರಸ್ತುತ 14 ವಯೋವೃದ್ಧರು ಆಶ್ರಯವಿದ್ದಾರೆ. ಹಿರಿಯರಿಗೆ ಆರೋಗ್ಯದ ಸಮಸ್ಯೆ ಉಂಟಾದಾಗ ವೈದ್ಯರ ಬಳಿ ಕರೆದೊಯ್ದು ಆರೋಗ್ಯ ಸೇವೆಯನ್ನು ಪತಿ ಕುಮಾರ್‌  ನಡೆಸುತ್ತಾರೆ. ಉಳಿದ ವಿಷಯಗ ಳತ್ತ ವಿಶಾಲ ಸುವರ್ಣ ಗಮನ ಹರಿಸುತ್ತಾರೆ.

ಟೈಲರಿಂಗ್‌ ಕೆಲಸದಲ್ಲಿ ಬಂದ ಹಣವನ್ನು ಆಶ್ರಮವಾಸಿಗಳ ಖರ್ಚು ವೆಚ್ಚಕ್ಕೆ  ಭರಿಸುವ ವಿಶಾಲ ಅವರಿಗೆ ಸಂಘ ಸಂಸ್ಥೆಗಳು ಸಹಕಾರ ನೀಡುತ್ತವೆ. ಎಷ್ಟೋ ವಯೋ ವೃದ್ಧರಿಗೆ ಸ್ವಂತ ಮಕ್ಕಳಿದ್ದರೂ ವಿಶಾಲ ಮಾತ್ರ ಮನೆಮಗ ಳಂತಿದ್ದಾರೆ. ವಿಶಾಲ ಅವರು ಗ್ರಾಹಕರ ಉಡುಪುಗಳನ್ನು ಮಾತ್ರವಲ್ಲ, ಆಶ್ರಮ ವಾಸಿಗಳ ಬಟ್ಟೆ ಗಳನ್ನೂ ಹೊಲಿದು  ಕೊಡುತ್ತಾರೆ. ಇವರು ನೀಡುತ್ತಿರುವ ರುಚಿಕರ, ಬಿಸಿಯೂಟ, ಆಹಾರ ಪದಾರ್ಥಗಳಿಂದಾಗಿ ಇವರು ಆಶ್ರಮವಾಸಿಗಳ ಅಚ್ಚುಮೆಚ್ಚಿನ  ಅನ್ನಪೂರ್ಣೇಶ್ವರಿಯಾಗಿದ್ದಾರೆ. ವಯೋವೃದ್ಧರನ್ನು ಮನೆಮಂದಿಯೇ ಆಶ್ರಮಕ್ಕೆ ಅಟ್ಟುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ವಿಶಾಲ ಮನಸ್ಸಿನ ವಿಶಾಲ ಅವರು ಹಿರಿಯರ ಸೇವೆಯಲ್ಲಿ ದೇವರನ್ನು ಕಾಣುತ್ತಿರುವುದು ಈ ಟೈಲರಮ್ಮನ ಸಾಧನೆಯಾಗಿದೆ.

ಗ್ರಾ.ಪಂ. ಮಾಜಿ ಸದಸ್ಯೆ ಈಗ ರುದ್ರಭೂಮಿ ನಿರ್ವಾಹಕಿ
ಪಡುಬಿದ್ರಿ: ನಂದಿಕೂರು ಗ್ರಾಮದಲ್ಲಿ ಜನನ. ಬಾಮು, ಕಿಟ್ಟ ಮೂಲ್ಯ ದಂಪತಿ ಪುತ್ರಿ ಸುಗುಣಾ ಮೂಲ್ಯ ಅವರು ಓದಿದ್ದು ಪ್ರಾಥಮಿಕ  ಶಾಲೆ. ಅವರಿಂದು ಪಡುಬಿದ್ರಿ ಗ್ರಾ.ಪಂ. ರುದ್ರಭೂಮಿಯ ನಿರ್ವಾಹಕಿ. ಪಂ. ಮೂಲಕ ವಹಿಸಿಕೊಂಡ ಕಾರ್ಯ ವನ್ನು ಗೌರವಯುತವಾಗಿ ಸುಗುಣಾ ನಿರ್ವಹಿಸುತ್ತಿದ್ದಾರೆ.

Advertisement

ಸುಗುಣಾ ಅವರು ಹಿಂದೆ ಪಡುಬಿದ್ರಿ ಗ್ರಾ. ಪಂ. ಸದಸ್ಯೆಯಾಗಿಯೂ ಜನ ಸೇವೆ ಮಾಡಿದವರು. ಆಗ ರುದ್ರ ಭೂಮಿ ನಿರ್ವಹಣೆಯನ್ನು ಆರಂಭಿಸಿದ ಸುಗುಣಾ, ಅಂದಿನಿಂದ ಇಂದಿನವರೆಗೆ ಸತತ 18 ವರ್ಷಗಳ ಕಾಲ ಚಾಚೂ ತಪ್ಪದೆ ತನ್ನ ಕಾರ್ಯವನ್ನು ಧೈರ್ಯದಿಂದ ಮುನ್ನಡೆಸುತ್ತಾ ಬಂದಿದ್ದಾರೆ. ಈ ತನ್ನ ಕಾರ್ಯಕ್ಕೆ ಧೈರ್ಯವೇ ಜೀವಾಳ ಎನ್ನುತ್ತಾರೆ ಅವರು.

ಪಂಚಾಯತ್‌ಗೆ ಶವದಹನ ಒಂದಕ್ಕೆ 150 ರೂ. ಗಳನ್ನು ಇವರು ಪಡೆಯುತ್ತಾರೆ. ಪಂಚಾಯತ್‌ ಮಾಹಿತಿಗಾಗಿ ಸಲ್ಲಬೇಕಾದ ಪ್ರತಿಯೊಂದು ಮಾಹಿತಿಯನ್ನು ಇವರು ಸಂಗ್ರಹಿಸುತ್ತಾರೆ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 8ಗಂಟೆಯವರೆಗೆ ದಹನ ಕ್ರಿಯೆಯಲ್ಲಿ ತಲ್ಲೀನರಾಗಿರುವ ಸುಗುಣಾ ಅವರಿಗೆ ಕಾರ್ಯದಲ್ಲಿ ತೃಪ್ತಿಯಿದೆ. ಮಾನವನ ಕಟ್ಟಕಡೆಯ ಯಾತ್ರೆಗೆ ಸಹಾಯಕಳಾಗಿ ಅವರು ಪಡುಬಿದ್ರಿ ಪಂಚಾಯತ್‌ ರುದ್ರಭೂಮಿಯಲ್ಲಿ ಒಂದಿನಿತೂ ಕೊರತೆ ಇರದಂತೆ ನೋಡಿಕೊಳ್ಳುತ್ತಿದ್ದಾರೆ. ಪಂಚಾಯತ್‌ ಇವರ ಈ ಕಾರ್ಯಕ್ಕೆ ವೇತನ ವನ್ನಾಗಲೀ, ಗೌರವ ಧನವನ್ನಾಗಲೀ ನೀಡುತ್ತಿಲ್ಲ. ಶವದಹನಕ್ಕೆ ಬರುವ ಸಾರ್ವಜನಿಕರು ಪ್ರೀತಿಯಿಂದ ನೀಡುವ ಸಂಭಾವನೆಯನ್ನಷ್ಟೇ ಅವರು ಪಡೆ ಯುತ್ತಾರೆ. ಇದ ಕ್ಕಾವ ಒತ್ತಾಯವಿಲ್ಲ.

ವಿಷಜಂತು ಕಡಿತಕ್ಕೆ ಚಿಕಿತ್ಸೆ ನೀಡುವ ನಾಟಿ ವೈದ್ಯೆ
ಶಿರ್ವ: ಪ್ರಚಾರ ಬಯಸದೆ ಎಲೆಮರೆಯ ಕಾಯಿಯಂತೆ ನಿಸ್ವಾರ್ಥ ಸೇವೆಯ ಮೂಲಕ ಜನರ ಪ್ರಾಣ ಉಳಿಸುವ ಕಾರ್ಯ ಮಾಡುತ್ತಿರುವ ನಾಟಿ ವೈದ್ಯೆ ಶಿರ್ವ ಚೆಕ್‌ಪಾದೆ ನಾಯಿದಡ್ಡು ನಿವಾಸಿ ಶಾಲಿನಿ ಡಿ. ಅಮೀನ್‌. ಹಲವು ತಲೆಮಾರಿನಿಂದ ವಿಷಜಂತು ಕಡಿತಕ್ಕೆ ಚಿಕಿತ್ಸೆ ನೀಡುತ್ತಾ ಬಂದಿರುವ ಕುಟುಂಬ ಇವರದ್ದು. ಮನೆಯಲ್ಲಿ ಸೋದರ ಮಾವ ದಿ| ನರಂಗ ಪೂಜಾರಿ ಅವರು ಚಿಕಿತ್ಸೆ ನೀಡುತ್ತಿದ್ದುದನ್ನು ಕುತೂಹಲದಿಂದ ನೋಡುತ್ತಿದ್ದ ಶಾಲಿನಿಯವರು ಸೋದರ ಮಾವನ ನಿಧನಾನಂತರ ಹಿರಿಯರಿಂದ ಬಳುವಳಿಯಾಗಿ ಬಂದ ನಾಟಿ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ನಾಟಿ ಚಿಕಿತ್ಸೆಗೆ ಬೇಕಾದ ದನದ ಹಾಲು ಮತ್ತು ಲಿಂಬೆಹಣ್ಣು ಮತ್ತಿತರ ಸಾಮಗ್ರಿಗಳು ಮನೆಯಲ್ಲಿಯೇ ಸಿದ್ಧವಿರುತ್ತದೆ.

ಪತಿ ದಿನಕರ ಅಮೀನ್‌ ಮತ್ತು ತಾಯಿ ಜಲಜಾ ಸಾಥ್‌ ನೀಡುತ್ತಿದ್ದಾರೆ. ವಿಷಪೂರಿತ ಹಾವು ಕಡಿತಕ್ಕೆ ಯಾವುದೇ ಫ‌ಲಾಪೇಕ್ಷೆಯಿಲ್ಲದೆ ಈವರೆಗೆ 6,000ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿ ಹಲವು ಜೀವ ಕಾಪಾಡಿದ ಹೆಗ್ಗಳಿಕೆ ಇವರದು. ಹಾವು ಕಚ್ಚಿದ ಜಾಗದಲ್ಲಿ ಹಾವಿನ ಹಲ್ಲು ಉಳಿದಿದ್ದರೆ ವಿಶಿಷ್ಟ ರೀತಿಯ ಚಿಕಿತ್ಸೆಯ ಮೂಲಕ ಹಲ್ಲನ್ನು ತೆಗೆಯುತ್ತಾರೆ. ತಮ್ಮಲ್ಲಿರುವ ವಿಶೇಷ ಕಲ್ಲಿನಿಂದ 2 ತಾಸಿನಲ್ಲಿ ವಿಷ ಹೀರುವಂತೆ ಮಾಡಿ ಬಳಿಕ 9 ವಿಧದ ಗಿಡಗಳ ಬೇರನ್ನು ನಿಂಬೆ ರಸದಲ್ಲಿ ತೇದು ತಯಾರಿಸಿದ ಲೇಪವನ್ನು ಗಾಯಕ್ಕೆ ಹಚ್ಚಿ ಬಳಿಕ ಅದನ್ನು ಹಲಸಿನ ಎಲೆಯಲ್ಲಿ ಹಾಕಿ ಸೇವಿಸಲು ನೀಡುತ್ತಾರೆ.

ಹಾವು ಕಚ್ಚಿ ಉಲ್ಬಣಗೊಂಡ ಕಾಲನ್ನು ಕಡಿಯಬೇಕೆಂದು ವೈದ್ಯರು ಸೂಚಿಸಿದ ಪ್ರಕರಣ ಗಳಲ್ಲೂ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ ಹೆಮ್ಮೆ ಶಾಲಿನಿಯವರದ್ದು. ನಾಟಿ ವೈದ್ಯ ಚಿಕಿತ್ಸೆಯ ನಡುವೆಯೂ ಶಾಲಿನಿ ಶಿರ್ವ ಗ್ರಾ.ಪಂ. ಸದಸ್ಯೆಯಾಗಿ ಜನಸೇವೆಯಲ್ಲಿ ನಿರತರು.

ಸಣ್ಣ ಉದ್ಯಮದಲ್ಲಿಯೂ ಬದುಕು ಹಸನು
ಮಣಿಪಾಲ: ಅಂಬಿಕಾ ರತ್ನಾಕರ್‌ ಮೂಲತಃ ಹೊಸ ನಗರದವರು. 15 ವರ್ಷಗಳ ಹಿಂದೆ ಶಾಂತಿ ನಗರದ ರತ್ನಾಕರ್‌ ಅವರ ಜತೆ ವಿವಾಹವಾಗಿ ಮಣಿಪಾಲಕ್ಕೆ ಬಂದ ಇವರು ಬದುಕು ಕಟ್ಟಿಕೊಂಡಿದ್ದು ಸೋದ್ಯೋಗದ ಮೂಲಕ.

ಅಂಬಿಕಾ ಅವರು ಮಣಿಪಾಲ ಈಶ್ವರ ನಗರ ದಲ್ಲಿ ನಡೆಸುತ್ತಿರುವ ಕ್ಯಾಂಟೀನ್‌ ಕಡಿಮೆ ದರದಲ್ಲಿ ರುಚಿ, ಶುಚಿಯಾದ ಉಪಾಹಾರ, ಗಂಜಿ ಊಟಕ್ಕೆ ಪ್ರಸಿದ್ಧ. ಕಾರ್ಮಿಕರಿಂದ ಹಿಡಿದು ಪ್ರತಿಷ್ಠಿತ ಎಂಐಟಿ ವಿದ್ಯಾರ್ಥಿಗಳು, ಸಿಬಂದಿ ಇವರ ಗ್ರಾಹಕರು. ಯಾವುದೇ ಕೆಲಸ, ಉದ್ಯೋಗವಿರಲಿ ಮಾಡುವ ಕೆಲಸದಲ್ಲಿ ಶ್ರದ್ಧೆ, ಬದ್ಧತೆ, ಉಳಿತಾಯ ಮನೋಭಾವನೆ, ದೂರದೃಷ್ಟಿ ಇದ್ದರೆ ಯಶಸ್ಸು ಕೈ ಬಿಡುವುದಿಲ್ಲ ಎಂಬುದಕ್ಕೆ ಇವರು ಉದಾಹರಣೆ.

ಅಂಬಿಕಾ ಮದುವೆಯಾಗಿ ಬಂದ ಸಮಯದಲ್ಲಿ ಪತಿ ರತ್ನಾಕರ್‌ ಸಣ್ಣ ಕ್ಯಾಂಟೀನ್‌ ನಡೆಸುತ್ತಿದ್ದರು. ಆರಂಭದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಕ್ಯಾಂಟೀನ್‌ ಬಂದ್‌ ಮಾಡುವ ಹಂತಕ್ಕೂ ಹೋಗಿತ್ತು. ಈ ಸಂದರ್ಭ ಅಂಬಿಕಾ ಅವರು ಪತಿಗೆ ಧೈರ್ಯ ತುಂಬಿ ಸಾಥ್‌ ನೀಡಿದರು. ಅಂದಿನಿಂದ ಇಂದಿನವರೆಗೂ ಕ್ಯಾಂಟೀನ್‌ನ ಕ್ಲೀನಿಂಗ್‌, ಅಡುಗೆ, ಸಪ್ಲೆ„ ಎಲ್ಲ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ನಿರ್ವಹಣೆ ಜತೆಗೆ ಸ್ತ್ರೀ ಶಕ್ತಿ ವಿವಿಧೋದ್ದೇಶ ಸಂಘದಲ್ಲಿಯೂ ತೊಡಗಿಸಿಕೊಂಡರು, ಸಣ್ಣ ಉಳಿತಾಯದ ಜತೆಗೂ ಸಾಲವನ್ನು ಪಡೆದು ಆರ್ಥಿಕ ಶಕ್ತಿಯೊಂದಿಗೆ ಕ್ಯಾಂಟೀನ್‌ ಅನ್ನು ಇನ್ನೂ ಉತ್ತಮವಾಗಿ ನಡೆಸಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಇವರದು ಶ್ರಮದ ಜೀವನ. ಜತೆಗೆ ಪತಿ ರತ್ನಾಕರ್‌ ಅವರು ಸಾಥ್‌ ನೀಡುತ್ತಾರೆ. ಇವರ ಕ್ಯಾಂಟೀನ್‌ನಲ್ಲಿ ಬೆಳಗ್ಗಿನ ರುಚಿಯಾದ ದೋಸೆ, ಪೂರಿ, ಬನ್ಸ್‌, ಪುಲಾವ್‌, ಹೆಸರು-ಅವಲಕ್ಕಿ ದೊರೆಯುತ್ತದೆ. ಅದು ಸಹ 20ರಿಂದ 30 ರೂ. ಒಳಗಿನ ದರಲ್ಲಿ. ಮಧ್ಯಾಹ್ನ 30 ರೂ.ಗೆ ಗಂಜಿ ಊಟ ಸಿಗುತ್ತದೆ. ಇವರು ಬಡ, ಮಧ್ಯಮ ವರ್ಗಕ್ಕೆ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡಿಯೂ ತಮ್ಮ ಬದುಕನ್ನು ಹಸನಾಗಿಸಿಕೊಂಡು ಕಾರು, ಸ್ವಂತ ಮನೆಯ ಕನಸನ್ನು ನನಸಾಗಿಕೊಂಡಿದ್ದಾರೆ.

(ಬರಹಗಳು: ವಿಜಯ ಆಚಾರ್ಯ, ಆರಾಮ, ಸತೀಶ್ಚಂದ್ರ ಶೆಟ್ಟಿ, ಅವಿನ್‌ ಶೆಟ್ಟಿ)

Advertisement

Udayavani is now on Telegram. Click here to join our channel and stay updated with the latest news.

Next