Advertisement

ಆರ್ಥಿಕ ಪ್ರಗತಿಗೆ ಸಬ್‌ ಕಾ ಪ್ರಯಾಸ್‌; ಸಚಿವೆ ನಿರ್ಮಲಾ ಸೀತಾರಾಮನ್‌

01:35 AM Dec 29, 2021 | Team Udayavani |

ಉಡುಪಿ: ದೇಶವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಶಕ್ತಿಗಳಲ್ಲಿ ಒಂದಾಗಿಸುವ ನಿಟ್ಟಿನಲ್ಲಿ “ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌’ ಜತೆಗೆ “ಸಬ್‌ ಕಾ ಪ್ರಯಾಸ್‌’ ಕೂಡ ಆವಶ್ಯಕ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

Advertisement

ಮಾಹೆ ವಿಶ್ವವಿದ್ಯಾನಿಲಯದ ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಶನ್‌ ಹೆಸರಾಂತ ಪತ್ರಕರ್ತ ಎಂ.ವಿ. ಕಾಮತ್‌ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಮಂಗಳ ವಾರ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ನಿರ್ಮಲಾ ಸೀತಾರಾಮನ್‌ ಅವರು “ಭಾರತ ಮತ್ತು ಕೊರೊನಾ ಸಾಂಕ್ರಾಮಿಕದ ಅನಂತರದಲ್ಲಿ ಆರ್ಥಿಕ ಪ್ರಗತಿ’ ಎಂಬ ವಿಷಯದ ಕುರಿತು ಮಾತನಾಡಿದರು.

ಕೊರೊನಾ ಸಾಂಕ್ರಾಮಿಕ ಬಂದ ಬಳಿಕ ಜನರ ಉಳಿತಾಯ ಮತ್ತು ಹೂಡಿಕೆಯ ಸ್ವರೂಪದಲ್ಲಿ ಬದಲಾವಣೆಗಳು ಕಂಡುಬಂದಿವೆ. ಆರ್ಥಿಕತೆ ಅವಲಂಬಿಸಿರುವ ಎಲ್ಲ ವಲಯಗಳಲ್ಲಿಯೂ ಪರಿವರ್ತನೆಗಳು ಘಟಿಸಿವೆ.

ನವೋದ್ಯಮವು ಭಾರತೀಯ ಆರ್ಥಿಕತೆಗೆ ಹೊಸ ರೂಪ ನೀಡುತ್ತಿದೆ. ಸರಕಾರ-ಜನರ ಭಾಗೀ ದಾರಿಕೆ (ಪಿಪಿಪಿ) ಆಧಾರದಲ್ಲಿ ಭಾರತವು ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿದೆ. ನಾವು ಈಗ ಮೂರು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗೆ ಹತ್ತಿರವಿದ್ದು, ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ದೇಶಗಳ ಸಾಲಿಗೆ ಸೇರಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ದೇಶದ ಆರ್ಥಿಕತೆಯನ್ನು ಇನ್ನಷ್ಟು ಸುಧಾರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನಿರ್ಮಲಾ ಹೇಳಿದರು.

ಇದನ್ನೂ ಓದಿ: ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Advertisement

ಭಾರತದಲ್ಲೂ ವೇಗವಾಗಿ
ಬೆಳೆಯುತ್ತಿರುವ ಆರ್ಥಿಕತೆ
ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿಯ ವಿತ್ತೀಯ ನೀತಿಗಳಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವ ಸಾಬೀತಾಗುತ್ತಿದೆ ಎಂದು ನಿರ್ಮಲಾ ಹೇಳಿದರು.

ಅವಕಾಶ ಸೃಷ್ಟಿಗೆ
ಕಾರಣವಾದ ಕೊರೊನಾ
ಕೊರೊನಾ ಸಾಂಕ್ರಾಮಿಕವನ್ನು ಸವಾಲಾಗಿ ಸ್ವೀಕರಿಸಿ, ಅದರಿಂದ ಅನೇಕ ಅವಕಾಶಗಳನ್ನು ಸೃಷ್ಟಿಸಿಕೊಂಡು ವ್ಯಾಪಾರ, ಉದ್ಯಮ ರಂಗದಲ್ಲಿ ಅನೇಕರು ಸಾಧನೆ ಮಾಡಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟರು. ಕೌಶಲ ಗಳಿಸಲು ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಣಿ ಹೆಚ್ಚಾಗುತ್ತಿದೆ. ಜಿಎಸ್‌ಟಿಯಿಂದ ಹೊರಗಿದ್ದ ಸಣ್ಣ, ಅತೀ ಸಣ್ಣ ವ್ಯಾಪಾರಸ್ಥರು ಜಿಎಸ್‌ಟಿ ಒಳಗೆ ಬಂದು, ಅದರ ಅನುಕೂಲ ಪಡೆಯುತ್ತಿದ್ದಾರೆ. ಹೂಡಿಕೆಗೂ ಆದ್ಯತೆ ನೀಡಲಾಗಿದ್ದು, ಪ್ರೊಡಕ್ಟಿವಿಟಿ ಲಿಂಕ್ಡ್ ಇನ್ಸೆಂಟಿವ್‌ ಸ್ಕೀಮ್‌ (ಪಿಎಲ್‌ಐಎಸ್‌)ಗೆ 13 ವಲಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದರಿಂದ ಆರ್ಥಿಕತೆಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next