ನಗರ : ನಗರೋತ್ಥಾನ ಯೋಜನೆಯಲ್ಲಿ ಪುತ್ತೂರು ನಗರದ ಮಹಮ್ಮಾಯ ಟೆಂಪಲ್ (ಎಂ.ಟಿ.) ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಿ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಎ. 5ರಂದು ಸಂಚಾರ ಮುಕ್ತ ಗೊಳಿಸಲಾಗುತ್ತದೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಹೃದಯ ಭಾಗದಿಂದ ಸಂಪರ್ಕಿಸುವ ಬಹುಪಯೋಗಿ ರಸ್ತೆ ಇದಾಗಿದ್ದು, ಮಳೆಗಾಲದಲ್ಲಿ ಡಾಮರು ಕಿತ್ತು ಹೋಗುವ ಸಮಸ್ಯೆಯಿಂದ ಕಾಂಕ್ರೀಟ್ ಕಾಮಗಾರಿ ನಡೆಸಲು ನಗರಸಭೆ ಆಡಳಿತವು ನಿರ್ಧರಿಸಿ ನಗತೋತ್ಥಾನ ಯೋಜನೆಯಲ್ಲಿ 50 ಲಕ್ಷ ರೂ. ಅನುದಾನ ನಿಗದಿಪಡಿಸಿತ್ತು.
ಕಾಂಕ್ರೀಟ್ ಕಾಮಗಾರಿಯ ಜತೆಗೆ ರಸ್ತೆಯನ್ನು ಅಗಲಗೊಳಿಸುವ, ಸಮರ್ಪಕ ಚರಂಡಿ ನಿರ್ಮಾಣ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ವರ್ತಕರು ಸ್ಥಳೀಯಾಡಳಿತಕ್ಕೆ ಮನವಿ ನೀಡಿದ್ದರು. ಎ. 10ರಿಂದ ಶ್ರೀ ಮಹಾಲಿಂಗೇಶ್ವರ ದೇಗುಲದ ಜಾತ್ರೆಯೂ ಆರಂಭಗೊಳ್ಳಲಿದ್ದು, ದೇವರ ಪೇಟೆ ಸವಾರಿ ಈ ರಸ್ತೆಯ ಮೂಲಕ ಪರ್ಲಡ್ಕ ಕಡೆಗಳಿಗೆ ಸಾಗಲಿದೆ. ಈ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲಿ ವಾಹನಗಳ ಓಡಾಟ ಸಮರ್ಪಕಗೊಳಿಸುವ ನಿಟ್ಟಿನಲ್ಲಿ ರಸ್ತೆ ಶೀಘ್ರ ಸಂಚಾರ ಮುಕ್ತಗೊಳಿಸುವಂತೆ ಸಾರ್ವಜನಿಕರಿಂದಲೂ ಒತ್ತಡ ಕೇಳಿ ಬಂದಿತ್ತು.
ಅಧಿಕಾರಿಗಳಿಂದ ಮಾಹಿತಿ
ಕಾಂಕ್ರೀಟ್ ಕಾಮಗಾರಿ ಆರಂಭಿಸಿ ಒಂದೂವರೆ ತಿಂಗಳು ಕಳೆದಿದೆ. ಹಾಲಿ ಕಾಂಕ್ರೀಟ್ ಕಾಮಗಾರಿಯ ಮೇಲೆ ನೀರು ಹಾಕಿ ಗಟ್ಟಿಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವಾರದಲ್ಲಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.