ಕಳೆದೆರಡು ದಶಕಗಳಿಂದೀಚೆಗೆ ವಿಶ್ವದೆಲ್ಲೆಡೆ ಆಹಾರ ಭದ್ರತೆ, ಸುಸ್ಥಿರ ಅಭಿವೃದ್ಧಿ, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ… ಮತ್ತಿತರ ವಿಷಯಗಳ ಕುರಿತಂತೆ ವ್ಯಾಪಕ ಚರ್ಚೆ, ಸಂಶೋಧನೆಗಳು ನಡೆಯುತ್ತಿವೆ. ಈ ಹಿಂದೆ ಜಗತ್ತಿನ ಬಲಾಡ್ಯ ದೇಶಗಳಂತೂ ರಕ್ಷಣೆಗೇ ಹೆಚ್ಚಿನ ಒತ್ತು ನೀಡಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಮ್ಮ ಬತ್ತಳಿಕೆಗೆ ಸೇರ್ಪಡೆಗೊಳಿಸಿಕೊಳ್ಳಲು ಜಿದ್ದಿಗೆ ಬಿದ್ದವರಂತೆ ಪೈಪೋಟಿ ನಡೆಸುತ್ತಿದ್ದವು. ಆದರೆ ಆಹಾರ ಭದ್ರತೆ ದೇಶದ ಇತರೆಲ್ಲ ಆದ್ಯತೆಗಳಿಗಿಂತ ಬಲುಮುಖ್ಯ ಎಂಬ ಪರಿಜ್ಞಾನ ಈ ದೇಶಗಳಿಗಿರಲಿಲ್ಲ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಆರು ದಶಕಗಳ ಹಿಂದೆ ಅಂದರೆ 1960-70ರ ದಶಕದಲ್ಲಿಯೇ ಆಹಾರ ಭದ್ರತೆಯ ಪ್ರಾಮುಖ್ಯವನ್ನು ಇಡೀ ಜಗತ್ತಿಗೆ ಸಾರಿದ ಶ್ರೇಯ ಗುರುವಾರದಂದು ನಿಧನ ಹೊಂದಿದ ಭಾರತದ “ಹಸುರು ಕ್ರಾಂತಿಯ ಪಿತಾಮಹ’ ಡಾ| ಎಂ.ಎಸ್. ಸ್ವಾಮಿನಾಥನ್ ಅವರಿಗೆ ಸಲ್ಲುತ್ತದೆ.
ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಆಹಾರ ಬೆಳೆಗಳ ತಳಿ ವಿಜ್ಞಾನಿಯಾಗಿ ದೇಶ ಮಾತ್ರವಲ್ಲದೆ ವಿಶ್ವದ ಕೃಷಿ ಕ್ಷೇತ್ರಕ್ಕೆ ಮಹತ್ತರ ಕೊಡುಗೆಗಳನ್ನು ನೀಡುವ ಮೂಲಕ ಕೃಷಿ ವಲಯದ ಮಹತ್ವ ಮತ್ತು ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮೇಧಾವಿ. ಇವೆಲ್ಲದಕ್ಕಿಂತ ಮುಖ್ಯವಾಗಿ ಆ ಕಾಲದಲ್ಲೇ ಬಡ ಕೃಷಿ ಕುಟುಂಬಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುವ ಮಹತ್ತರ ಕನಸು ಕಂಡಿದ್ದರು ಡಾ| ಸ್ವಾಮಿನಾಥನ್. ಕೃಷಿಗೆ ಔದ್ಯೋಗಿಕ ಸ್ವರೂಪವನ್ನು ನೀಡುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಂಡು ಅದನ್ನು ಕಾರ್ಯರೂಪಕ್ಕೆ ತಂದ ಶ್ರೇಯಸ್ಸೂ ಅವರಿಗೆ ಸಲ್ಲುತ್ತದೆ.
ರಾಸಾಯನಿಕ ಮತ್ತು ಜೈವಿಕ ತಂತ್ರಜ್ಞಾನವನ್ನು ಬಳಸಿ ದೇಶದ ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ಗೋಧಿಯ ಇಳುವರಿಯನ್ನು ಹೆಚ್ಚಿಸುವ ಜತೆಯಲ್ಲಿ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ತರಬಲ್ಲ ಹೊಸ ತಳಿಗಳನ್ನು ಪರಿಚಯಿಸಿ, ಕೃಷಿಕರ ಬದುಕನ್ನು ಹಸನಾಗಿಸಿದರು. ಇದು ದೇಶದ ಹಸುರು ಕ್ರಾಂತಿಗೆ ನಾಂದಿ ಹಾಡಿತಲ್ಲದೆ ಇಲ್ಲೂ ಸ್ವಾಮಿನಾಥನ್ ಮುಂಚೂಣಿಯಲ್ಲಿ ನಿಂತರು.
ಕೃಷಿ ಬೆಳೆಗಳು ಮತ್ತು ಆಹಾರ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ ಆರ್ಥಿಕತೆಯ ಬಲವರ್ಧನೆಗೆ ಪರೋಕ್ಷವಾಗಿ ಕಾರಣಕರ್ತರಾದ ಸ್ವಾಮಿನಾಥನ್ ತಮ್ಮ ಜೀವನ ಪರ್ಯಂತ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಕೈಲಾದ ಕೊಡುಗೆ ನೀಡುತ್ತಲೇ ಬಂದಿದ್ದರು. ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳಿಗೆ ಕೃಷಿ ಸಲಹೆಗಾರರಾಗಿ, ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು.
ಪರಿಸರದ ಮಡಿಲಲ್ಲಿಯೇ ಬೆಳೆದ ಡಾ| ಸ್ವಾಮಿನಾಥನ್, ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣ ಕ್ರಮಗಳಲ್ಲೆಲ್ಲ ಪರಿಸರ ಕಾಳಜಿ ಇತ್ತು ಎಂಬುದನ್ನು ಮರೆಯುವಂತಿಲ್ಲ. ರಾಸಾಯನಿಕ ಗೊಬ್ಬರಗಳ ಬಳಕೆಗೆ ಉತ್ತೇಜನ ನೀಡುತ್ತಲೇ ಅದರ ಅತೀ ಬಳಕೆ, ಕಳಪೆ ಗುಣಮಟ್ಟದ ರಸಗೊಬ್ಬರಗಳ ಬಳಕೆಯ ಕುರಿತಂತೆ ಕೃಷಿಕರಿಗೆ ಸದಾ ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ದೇಶದ ಕೃಷಿ ವಲಯದ ಭೀಷ್ಮನಂತಿದ್ದ “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ’ ಡಾ| ಸ್ವಾಮಿನಾಥನ್ ಅವರು ಅಸ್ತಂಗತರಾದರೂ ಕೃಷಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ, ಸಾಧನೆಗಳು ಅವರನ್ನು ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಚಿರಸ್ಥಾಯಿಯಾಗಿಸಲಿದೆ.