ಬೆಂಗಳೂರು: ಟಿವಿ, ಬೈಕ್, ಫ್ರಿಡ್ಜ್ ಇದ್ದವರ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಪಡೆಯಲಾಗುವುದು ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸ್ವಪಕ್ಷದ ಶಾಸಕ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಅವರದೋ ಅಥವಾ ಯಾವ ಐಎಎಸ್ ಅಧಿಕಾರಿ ಲಾಬಿಯೋ ಗೊತ್ತಿಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಎಲ್ಲ ವರ್ಗದ ಸರ್ಕಾರ. ಈ ವಿಚಾರದ ಬಗ್ಗೆ ಜಾರಿ ಆದೇಶವೇ ಆಗಿಲ್ಲ. ನಕಲಿ ಕಾರ್ಡ್ ಗಳ ಬಗ್ಗೆ ತನಿಖೆ ಮಾಡಿ ರದ್ದು ಮಾಡಲಿ. ಆದರೆ ಇಂತಹ ದ್ವಂದ್ವ ಹೇಳಿಕೆ ನೀಡಬಾರದು. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಪದವೀಧರ ದಂಪತಿಯಿಂದ ದೇಶಿ ಹಸು ಸಾಕಾಣಿಕೆ
ಕೆಲವು ಖಾಸಗಿ ಬ್ಯಾಂಕ್ ಗಳು ಡಿಪಾಸಿಟ್ ಇಲ್ಲದೆ ಬೈಕ್ ಕೊಡುತ್ತಾರೆ. ಬಡವರು ಮನರಂಜನೆಗೋಸ್ಕರ ಟಿವಿ ಇಡುತ್ತಾರೆ. ಮಹಿಳೆಯರು ಒತ್ತಡ ಕಳೆಯಲು ಟಿವಿ ನೋಡುತ್ತಾರೆ. ನಾವು ಫ್ರಿಡ್ಜ್, ಟಿವಿ ಇಡಬಹುದು, ಬಡವರು ಟಿವಿ ಫ್ರಿಡ್ಜ್ ಇಡಬಾರದಾ ಎಂದು ಪ್ರಶ್ನಿಸಿದರು.
2003 ರಲ್ಲಿ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದೀನಿ, ಹೋರಾಟ ಮಾಡಿದ್ದೇನೆ. ಇದು ಸರ್ಕಾರದ ಹೇಳಿಕೆಯಲ್ಲ. ಸಚಿವವರಿಗೆ ಯಾರೋ ಅಧಿಕಾರಿ ಹೇಳಿರಬಹುದು. ಇದಕ್ಕೆ ನಮ್ಮ ವಿರೋಧವಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.