ಕೊಟ್ಟಿಗೆಹಾರ: ‘ಅಲೇಕಾನ್ ಗ್ರಾಮದ ರಸ್ತೆ ಅಭಿವೃಧ್ದಿಗೆ 65 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು’ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಸೋಮವಾರದಂದು ಅಲೇಕಾನು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ನೂತನವಾಗಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಸೋಲಾರ್ ಬೇಲಿ ಉದ್ಘಾಟಿಸಿ ಮಾತನಾಡಿದರು.
‘ಅಲೇಕಾನ್, ಮಲೆಮನೆ ಹಾಗೂ ಮೇಗೂರು ಭಾಗದಲ್ಲಿ ವಿಪರೀತ ಆನೆ ಕಾಟವಿದ್ದು ಅದನ್ನು ತಡೆಯಲು ಗ್ರಾಮಗಳ ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಅಳವಡಿಕೆ ಮಾಡಲಾಗಿದೆ. ಮೂಡಿಗೆರೆ ತಾಲ್ಲೂಕಿನ ತತ್ಕೊಳ ಭಾಗದಲ್ಲಿ ಈಗಾಗಲೇ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು ಯಶಸ್ವಿಯಾಗಿದೆ. ಈ ಭಾಗದ ರೈತರಿಗೂ ಕೃಷಿ ಚಟುವಟಿಕೆ ಅಭಿವೃದ್ದಿ ಪಡಿಸಲು ಕಾಡಾನೆ ಕಾಟ ತಪ್ಪಿಸಲು ಈ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ’ ಎಂದರು.
ಎಸಿಎಫ್ ರಾಜೇಶ್ ನಾಯ್ಕ್ ಮಾತನಾಡಿ ‘ಸೋಲಾರ್ ತಂತಿ ಬೇಲಿ ಅಳವಡಿಕೆಯಿಂದ ಬೆಳೆ ಹಾನಿ ಜತೆಗೆ ಪ್ರಾಣ ಹಾನಿಯೂ ತಪ್ಪುತ್ತದೆ. ಈ ಬೇಲಿಯಿಂದ ಕಾಡು ಪ್ರಾಣಿಗಳ ಜೀವಕ್ಕೂ ಅಪಾಯವಿಲ್ಲ’ ಮೂಡಿಗೆರೆ ತಾಲ್ಲೂಕಿನ ಬೈರಾಪುರ,ಗುತ್ತಿ,ಹಾಗೂ ಕುಂಬರಡಿಯಲ್ಲೂ ಈ ಯೋಜನೆ ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಸೋಲಾರ್ ತಂತಿ ಕಾರ್ಯ 5 ಕಿ.ಮೀ ವ್ಯಾಪ್ತಿಯಲ್ಲಿ ಅಲೇಕಾನ್, ಮಲೆಮನೆ, ಮೇಗೂರು ಭಾಗದಲ್ಲಿ 30ಲಕ್ಷ ರೂ. ಅನುದಾನದಲ್ಲಿ ಈ ಯೋಜನೆ ತಯಾರಾಗಿದೆ’ ಎಂದರು.
ಇದನ್ನೂ ಓದಿ : ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ: ನಟಿ ಕಂಗನಾ ರಣಾವತ್
ಈ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ.ಧರ್ಮಪಾಲ್, ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಸ್ಥಳೀಯ ಮುಖಂಡರಾದ ಬಿ.ಎಂ.ಭರತ್, ಪರೀಕ್ಷಿತ್ ಜಾವಳಿ, ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ್, ಸತೀಶ್ ಬಾಳೂರು, ಸಂದೀಪ್ ದೇವನಗೂಲ್, ಸುರೇಶ್ ಗೌಡ, ಉಪೇಂದ್ರಗೌಡ ಮತ್ತಿತರರು ಇದ್ದರು.