Advertisement
ತಮಿಳುನಾಡಿನ ಪಕ್ಷಗಳು ಹಾಗೂ ಸಂಘಟನೆಗಳು, ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿರುವ ಈ ಸಂದರ್ಭದಲ್ಲೇ ಸೂರಪ್ಪ ಅವರ ನೇಮಕಾತಿ ಆದೇಶ ಹೊರಬಿದ್ದಿರುವುದು ಅಲ್ಲಿನ ರಾಜಕೀಯ ನಾಯಕರ ಕಣ್ಣು ಕೆಂಪಾಗಿಸಿದೆ. ಉಪ ಕುಲಪತಿ ಸ್ಥಾನಕ್ಕೆ ತಮಿಳುನಾಡಿನಲ್ಲಿ ಸೂಕ್ತ ವ್ಯಕ್ತಿ ಸಿಗಲಿಲ್ಲವೇ? ಎಂಬರ್ಥದಲ್ಲಿ ರಾಜಕೀಯ ಪಕ್ಷಗಳು ಆದೇಶದ ವಿರುದ್ಧ ಕಿಡಿಕಾರುತ್ತಿವೆ. ಆದರೆ, ಸರಕಾರ ಮಾತ್ರ ಆದೇಶದಲ್ಲಿ ತನ್ನ ಪಾತ್ರವಿಲ್ಲ ಎಂದಿದೆ. ತಮಿಳುನಾಡು ಬಿಜೆಪಿ ಘಟಕ ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದೆ. ಹಾಗಾಗಿ ಸೂರಪ್ಪ ನೇಮಕಾತಿ ಅಲ್ಲಿ ರಾಜಕೀಯ ಪಕ್ಷಗಳನ್ನು ಇಬ್ಭಾಗವಾಗಿಸಿದೆ.
ಸೂರಪ್ಪ ಹಿನ್ನೆಲೆ: ಬೋಧನಾ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಸೂರಪ್ಪ, ಐಐಟಿ ರೋಪರ್ ಸಂಸ್ಥೆಯ ಮಾಜಿ ನಿರ್ದೇಶಕರೂ ಹೌದು. ದೇಶದ ಅತೀ ಶ್ರೇಷ್ಠ ವಿಶ್ವವಿದ್ಯಾಲಯವೆಂಬ ಖ್ಯಾತಿ ಗಳಿಸಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಣ್ಣಾ ವಿವಿಯ ಉಪ ಕುಲಪತಿ ಹುದ್ದೆಗೆ ಅವರನ್ನು ನೇಮಿಸಿ ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಎರಡು ವರ್ಷಗಳಿಂದ ಖಾಲಿಯಿದ್ದ ಅಣ್ಣಾ ವಿವಿಯ ಉಪ ಕುಲಪತಿ ಸ್ಥಾನವನ್ನು ಈಗ ತುಂಬಲಾಗಿದೆ. ಕಮಲ್ ಟ್ವೀಟ್: ಸೂರಪ್ಪ ನೇಮಕಾತಿ ವಿರೋಧಿ ಕೂಗಿಗೆ ತಮ್ಮ ದನಿಯನ್ನೂ ಸೇರಿಸಿರುವ ‘ಮಕ್ಕಳ್ ನೀಧಿ ಮಯ್ಯಂ’ ಪಕ್ಷದ ಸಂಸ್ಥಾಪಕ ಹಾಗೂ ನಟ ಕಮಲ ಹಾಸನ್, ಕರ್ನಾಟಕದಿಂದ ನೀರು ಕೊಡಿ ಎಂದು ನಾವು ಕೇಳಿದರೆ ಅಲ್ಲಿಂದ ಉಪ ಕುಲಪತಿಯನ್ನು ನೀಡಲಾಗಿದೆ ಎಂದು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ. ಆದರೆ, ಬಳಿಕ ಎಚ್ಚೆತ್ತುಕೊಂಡಿರುವ ಅವರು, ತಾವು ಉಪ ಕುಲಪತಿಯ ವಿರುದ್ಧ ವೈಯಕ್ತಿಕ ವಾಗ್ಧಾಳಿ ನಡೆಸಿಲ್ಲ. ನನ್ನ ಟ್ವೀಟ್ ಹಿಂದಿನ ಕಾಳಜಿ ಕಾವೇರಿ ನೀರಿನ ಬಗ್ಗೆಯಷ್ಟೇ ಎಂದಿರುವ ಅವರು, ಕರ್ನಾಟಕ ಮೂಲದ ನಾಗೇಶ್ ನನ್ನ ಗುರುಗಳಲ್ಲೊಬ್ಬರು. ನನ್ನ ಸ್ನೇಹಿತರಾದ ರಾಜ್‌ಕುಮಾರ್ ಅಣ್ಣ, ಬಿ. ಸರೋಜಾದೇವಿ, ರಜನೀಕಾಂತ್, ಅಂಬರೀಶ್ ಅವರೆಲ್ಲರೂ ಸ್ನೇಹಿತರೇ ಎಂದು ಸ್ಪಷ್ಟನೆ ನೀಡಿದ್ದಾರೆ.
Related Articles
Advertisement
ರಾಜ್ಯ ಸರಕಾರದ ಸ್ಪಷ್ಟನೆಸೂರಪ್ಪ ನೇಮಕಾತಿ ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಪರ ಸ್ಪಷ್ಟನೆ ನೀಡಿರುವ ಮೀನುಗಾರಿಕ ಸಚಿವ ಡಿ. ಜಯಕುಮಾರ್, ‘ಸೂರಪ್ಪ ನೇಮಕಾತಿ ತಮಿಳುನಾಡಿನ ವಿಶ್ವವಿದ್ಯಾಲಯಗಳ ಕುಲಪತಿಯಾಗಿರುವ ರಾಜ್ಯಪಾಲರ ನಿರ್ಧಾರ. ಇದರಲ್ಲಿ ರಾಜ್ಯಸರಕಾರದ ಪಾತ್ರವೇನೂ ಇಲ್ಲ’ ಎಂದಿದ್ದಾರೆ.