Advertisement

ಎಂ.ಕಾಂ. ಪದವಿ ಪಡೆದು ಕೃಷಿಯನ್ನೇ ಆರಿಸಿಕೊಂಡ ಸಾಧಕ

09:40 PM Jan 04, 2020 | Sriram |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಕೋಟ: ಸಾಲಿಗ್ರಾಮ ಸಮೀಪ ಪಾರಂಪಳ್ಳಿಯ ರಮೇಶ್‌ ಹೇಳೆìಯವರು ಪ್ರಗತಿಪರ ಕೃಷಿಕರಾಗಿ, ಕೃಷಿ ಸಂಶೋಧಕನಾಗಿ, ನೂರಾರು ಮಂದಿಗೆ ಮಾಹಿತಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂದೆ ರಾಮಚಂದ್ರ ಹೇಳೆìಯವರು ಬ್ರಹ್ಮಾವರ ಎಸ್‌.ಎಂ.ಎಸ್‌. ಕಾಲೇಜಿನ ಪ್ರಾಂಶುಪಾಲರಾಗಿದ್ದರು ಹಾಗೂ ಕೃಷಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿದ್ದರು. ಹೀಗಾಗಿ ಮಗನನ್ನು ಕೃಷಿ ಕ್ಷೇತ್ರ ಕೈ ಬೀಸಿ ಕರೆದಿತ್ತು. 1983ರಲ್ಲಿ ಎಂ.ಕಾಂ. ಪದವಿ ಮುಗಿಸಿದ ಇವರಿಗೆ ನೂರಾರು ವೈಟ್‌ಕಾಲರ್‌ ಜಾಬ್‌ಗಳು ಪ್ರಾಪ್ತವಾಗುತ್ತಿದ್ದವು. ಆದರೆ ಅವೆಲ್ಲವನ್ನೂ ದೂರ ಮಾಡಿ ಕೃಷಿಯ ಕಡೆಗೆ ಮುಖ ಮಾಡಿದರು. ತನ್ನ 6 ಎಕ್ರೆ ಜಮೀನಿನಲ್ಲಿ ಭತ್ತ, ತೆಂಗು, ಅಡಿಕೆ, ಉದ್ದು ಮುಂತಾದ ಧಾನ್ಯ, ವಿವಿಧ ತರಕಾರಿಗಳು, ಹಣ್ಣುಗಳನ್ನು ಬೇಸಾಯ ಮಾಡಿದರು. ಸ್ಥಳೀಯ ರೈತರನ್ನು ಸೇರಿಸಿಕೊಂಡು ಆಕಾಶವಾಣಿಯಲ್ಲಿ ಕೃಷಿಗೆ ಸಂಬಂಧಿಸಿದ ಸರಣಿ ಕಾರ್ಯಕ್ರಮ, ಸಂದರ್ಶನಗಳನ್ನು ಇವರು ನೀಡಿದ್ದಾರೆ.

ಸಮಗ್ರ ಕೃಷಿ ಪದ್ಧತಿ
ಕೇವಲ ಸಾಂಪ್ರದಾಯಿಕ ಅಥವಾ ಕೇವಲ ಯಾಂತ್ರಿಕ ವಿಧಾನಕ್ಕೆ ಸೀಮಿತವಾಗದೆ ಉತ್ತಮ ಫಸಲು ಪಡೆಯಬೇಕಾದರೆ ಯಾವ ವಿಧಾನ ಉತ್ತಮ ಅದನ್ನೇ ಇವರು ಅನುಸರಿಸುತ್ತಾರೆ.

ಭತ್ತದ ಜತೆಗೆ ತರಕಾರಿ, ತೆಂಗು, ಅಡಿಕೆ, ಧಾನ್ಯಗಳು, ಹೈನುಗಾರಿಕೆ ಹೀಗೆ ಸಮಗ್ರ ವಿಧಾನವನ್ನು ಅನುಸರಿಸುತ್ತಿದ್ದಾರೆ.

ಐದು ಬಾರಿ ಕೃಷಿ ಪ್ರಶಸ್ತಿ
ಉತ್ತಮ ಇಳುವರಿಗಾಗಿ ಕೃಷಿ ಇಲಾಖೆಯಿಂದ ಎರಡು ಬಾರಿ ಜಿಲ್ಲಾ ಮಟ್ಟದ ಪ್ರಶಸ್ತಿ ಹಾಗೂ ಸತತ ಮೂರು ಬಾರಿ ತಾಲೂಕು ಮಟ್ಟದ ಪ್ರಶಸ್ತಿ ಇವರಿಗೆ ಸಂದಿದೆ.

Advertisement

ಕೋಟ ಸಿ.ಎ.ಬ್ಯಾಂಕ್‌ನಿಂದ ಉತ್ತಮ ಕೃಷಿಕ ಸಮ್ಮಾನ, ಕಾರ್ಕಡ ಗೆಳೆಯರ ಬಳಗದ ಸಮ್ಮಾನ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

ಸಂಶೋಧನಾ ಪ್ರವೃತ್ತಿ
ಕೃಷಿಯಲ್ಲಿ ಸದಾ ಸಂಶೋಧನೆಯಲ್ಲಿ ತೊಡಗುವ ಇವರು ತನ್ನ ಭೂಮಿಗೆ ಯಾವ ಬೆಳೆ, ಯಾವ ತಳಿ ಉತ್ತಮ ಎನ್ನುವ ಹುಡುಕಾಟದಲ್ಲಿರುತ್ತಾರೆ ಹಾಗೂ ಹೊಸ-ಹೊಸ ಭತ್ತದ ತಳಿಗಳನ್ನು ಅಳವಡಿಸಿ ಫಲಿತಾಂಶವನ್ನು ಗುರುತಿಸುತ್ತಾರೆ. ಬೆಳೆಗಳಿಗೆ ತಗಲುವ ರೋಗದ ನಿವಾರಣೆಗೂ ತನ್ನದೇ ಆದ ಪ್ರಯೋಗಗಳ ಮೂಲಕ ಪರಿಹಾರವನ್ನೂಕಂಡುಕೊಳ್ಳುತ್ತಾರೆ. ಬೆಳೆ, ತಳಿ, ರೋಗ ಬಾಧೆ ನಿವಾರಣೆ,ಉತ್ತಮ ಇಳುವರಿ ಮುಂತಾದ ವಿಚಾರಗಳ ಕುರಿತು ಉಡುಪಿ ಜಿಲ್ಲೆಯ ನೂರಾರು ರೈತರು ಇವರ ಬಳಿ ಮಾಹಿತಿ ಮಾರ್ಗದರ್ಶನ ಪಡೆಯುತ್ತಾರೆ.

ಕೃಷಿ ಯಶಸ್ಸಿನ ಗುಟ್ಟು
ಜಿಲ್ಲೆಯಲ್ಲಿ ಅಪರೂಪವೆಂಬಂತೆ ಐದು ಬಾರಿ ಕೃಷಿ ಇಲಾಖೆಯ ಪ್ರಶಸ್ತಿ ಪಡೆದ ಇವರಲ್ಲಿ ತಮ್ಮ ಯಶಸ್ವಿನ ಕುರಿತು ಪ್ರಶ್ನಿಸಿದರೆ, ನಾನು ಮುಂಗಾರು ನಾಟಿಗೆ ಎಪ್ರಿಲ್‌ ತಿಂಗಳಲ್ಲೇ ಗದ್ದೆಯನ್ನು ಉಳುಮೆ ಮಾಡುತ್ತೇನೆ. ಈ ರೀತಿ ಉಳುಮೆ ಮಾಡುವುದರಿಂದ ಬಿಸಿಲಿನ ತೀವ್ರತೆಗೆ ಮಣ್ಣು ಉತ್ತಮವಾಗಿ ಹದಗೊಳ್ಳುತ್ತದೆ. ಅನಂತರ ಹಸಿರೆಲೆ ಗಿಡವನ್ನು ಬೆಳೆದು ಎರಡನೇ ಬಾರಿ ಉಳುಮೆ ಮಾಡುವಾಗ ಹಸಿರೆಲೆಗಳನ್ನು ಮಣ್ಣಿಗೆ ಸೇರಿಸಬೇಕು.ಅಗತ್ಯ ಪ್ರಮಾಣದಲ್ಲಿ ಸುಣ್ಣವನ್ನು ಮಣ್ಣಿಗೆ ನೀಡಬೇಕು ಮತ್ತು ಹಟ್ಟಿಗೊಬ್ಬರ ಅಗತ್ಯವಾಗಿ ಬೇಕು. ರಾಸಾಯನಿಕ ಗೊಬ್ಬರ ಅನಿವಾರ್ಯವಾದರೆ ಬಳಕೆ ಮಾಡಬಹುದು. ಈ ವಿಧಾನ ಅನುಸರಿಸುವುದರಿಂದ ಉತ್ತಮ ಫಸಲು ಸಾಧ್ಯ ಎನ್ನುತ್ತಾರೆ.

ನಿಮ್ಮ ಭೂಮಿಗೆ ನೀವೇ ಕೃಷಿ ವಿಜ್ಞಾನಿ
ಕೃಷಿಯಲ್ಲಿ ಎಲ್ಲವನ್ನೂ ವಿಜ್ಞಾನಿಗಳಿಂದ, ಅಧಿಕಾರಿಗಳಿಂದ ಕೇಳಿ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಭೂಮಿಗೆ ಯಾವ ಬೆಳೆ ಸೂಕ್ತ, ಯಾವ ಬೆಳೆಗೆ ಯಾವ ರೀತಿ ಪೋಷಕಾಂಶ ನೀಡಬೇಕು. ಯಾವುದನ್ನು ನೀಡಬಾರದು ಎನ್ನುವ ಕುರಿತು ನಾವೇ ಸ್ವತಃ ಅನ್ವೇಷಣೆಗಳನ್ನು ಮಾಡಿ ಫಲಿತಾಂಶ ಪಡೆಯಬೇಕು. ರೇಡಿಯೊ, ಪತ್ರಿಕೆಗಳಲ್ಲಿ ಕೃಷಿಗೆ ಸಂಬಂಧಿಸಿದ ಹಲವಾರು ವಿಚಾರಗಳು ಬರುತ್ತದೆ. ಅವುಗಳನ್ನು ಓದಿ ಅಧ್ಯಯನ ಮಾಡಬೇಕು. ಶೂನ್ಯ ಬಂಡವಾಳದ ಹಲವಾರು ಬೆಳೆಗಳಿಗೆ ಅವುಗಳ ಕುರಿತು ತಿಳಿದುಕೊಳ್ಳಬೇಕು ಮತ್ತು ಬೇಸಾಯ ಮಾಡುವವನಿಗೆ ಹೈನುಗಾರಿಕೆ ಅಗತ್ಯವಾಗಿ ಬೇಕು.ಯಾಕೆಂದರೆ ಹಟ್ಟಿಗೊಬ್ಬರದಷ್ಟು ಉತ್ತಮ ಸಾರ ಬೇರೆ ಇಲ್ಲ. ಕೃಷಿ ಇಂದು ಅತ್ಯಂತ ಲಾಭದಾಯಕವಾಗಿದೆ. ಮುಂದೆ ಇದಕ್ಕೆ ಉತ್ತಮ ಭವಿಷ್ಯವಿದೆ.
-ರಮೇಶ ಹೇಳೆì, ಪಾರಂಪಳ್ಳಿ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next